ಬೆಂಗಳೂರಿನ ನಾಗಸಂದ್ರದಿಂದ ಮಾದಾವರ ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗದ ಶಾಸನಬದ್ಧ ಸುರಕ್ಷತಾ ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಹಾಗೂ ಅವರ ತಂಡ ಪರಿಶೀಲನೆ ನಡೆಸಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದ್ದು, ಇದೀಗ ನಾಗಸಂದ್ರ To ಮಾದಾವರ ಮೆಟ್ರೋ ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಹಾಗೂ ಅವರ ತಂಡ ಗುರುವಾರ ನಾಗಸಂದ್ರದಿಂದ ಮಾದಾವರವರೆಗೆ ನಡೆಸಿದ ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗದ ಶಾಸನಬದ್ಧ ಸುರಕ್ಷತಾ ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಬಗ್ಗೆ ಸ್ವತಃ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿತ್ತು. ಇದರ ಬೆನ್ನಲ್ಲೇ ನೆನ್ನೆ ನಾಗಸಂದ್ರ To ಮಾದಾವರ ಮೆಟ್ರೋ ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ.
ನಾಗಸಂದ್ರ To ಮಾದಾವರ ಮೆಟ್ರೋ ಮಾರ್ಗವನ್ನು ಗುರುವಾರ (ಅ.03) ಮತ್ತು ಶುಕ್ರವಾರ (ಅ,04) ರೈಲ್ವೆ ಸುರಕ್ಷತಾ ಆಯುಕ್ತರು, ತಪಾಸಣೆ ಮಾಡಿದ್ದರು. ನೆನ್ನೆ ಸಂಜೆ ತಪಾಸಣೆ ಮುಗಿಸಿ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಿದ್ದು, ನಾಗಸಂದ್ರದಿಂದ ಮಂಜುನಾಥ್ ನಗರ, ಚಿಕ್ಕಬಿದರಕಲ್ಲು, ಹಾಗೂ ಮಾದಾವರಕ್ಕೆ ಮೆಟ್ರೋ ರೈಲು ಸಂಚಾರ ಮಾಡಲಿದೆ. 298 ಕೋಟಿ ವೆಚ್ಚದಲ್ಲಿ ನಾಲ್ಕು ಮೆಟ್ರೋ ಸ್ಟೇಷನ್ ಕಾಮಗಾರಿ ಮಾಡಲಾಗಿದೆ. ಹಸಿರು ಮಾರ್ಗ ವಿಸ್ತರಣೆಯಿಂದ ಬಿಐಇಸಿಗೆ ಸಂಪರ್ಕ ಸುಲಭವಾಗಲಿದ್ದು, ಬೆಂಗಳೂರಿಗೆ ಪ್ರವೇಶಿಸುವವರಿಗೂ ಹೆಚ್ಚಿನ ಅನುಕೂಲವಾಗಲಿದೆ.
ಹಸಿರು ಮಾರ್ಗದ ಸುಮಾರು 3.7 ಕಿ.ಮೀ. ವಿಸ್ತರಿತ ನಾಗಸಂದ್ರದಿಂದ ಮಾದಾವರದವರೆಗಿನ ಮೆಟ್ರೋ ಮಾರ್ಗ ಕಳೆದ ಐದು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ವಿಸ್ತರಿತ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ನಿಲ್ದಾಣಗಳಿವೆ. ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ, ತುಮಕೂರು ರಸ್ತೆ, ಅಂಚೆಪಾಳ್ಯ, ಜಿಂದಾಲ್ ನಗರದ ನಾಗರಿಕರು ಮೆಟ್ರೋದಲ್ಲಿ ಪ್ರಯಾಣಿಸಲು ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಬರಬೇಕಾಗಿತ್ತು. ಈಗ ಈ ಮಾರ್ಗ ಸಂಪೂರ್ಣವಾದ ಬಳಿಕ ಐದು ಕಿಲೋಮೀಟರ್ಗಳಷ್ಟು ಪ್ರಯಾಣಿಸುವುದು ತಪ್ಪಲಿದೆ. ಹಸಿರು ಮಾರ್ಗ ವಿಸ್ತರಣೆಯಿಂದ ನಗರದ ಪ್ರಮುಖ ಪ್ರದರ್ಶನ ಕೇಂದ್ರವಾದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಸಂಪರ್ಕಕ್ಕೆ ಸಹಕಾರಿಯಾಗಲಿದೆ.
ನಾಗಸಂದ್ರ-ಮಾದಾವರ ನಡುವಿನ ಕಾಮಗಾರಿ 2017ರಲ್ಲಿ ಆರಂಭವಾಗಿತ್ತು. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ 2019ರ ಮಧ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂಸ್ವಾಧೀನ, ಸ್ಥಳೀಯರ ವಿರೋಧ ಹಾಗೂ ನಂತರ ಕೋವಿಡ್ ಸಮಸ್ಯೆ ಸೇರಿದಂತೆ ಹತ್ತು ಹಲವು ಸವಾಲು- ಸಮಸ್ಯೆಗಳ ಕಾರಣದಿಂದ ಐದು ವರ್ಷ ತಡವಾಗಿ ಈ ಮಾರ್ಗ ಮೆಟ್ರೋ ಸಂಚಾರಕ್ಕೆ ಲಭ್ಯವಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ದಿನಾಂಕ ನಿಗದಿಪಡಿಸಿದ ಬಳಿಕ ಈ ಮಾರ್ಗದಲ್ಲಿ ಮೆಟ್ರೋ ರೈಲು ವಾಣಿಜ್ಯ ಸಂಚಾರ ಮಾಡಲಿದೆ. ಸದ್ಯ ನಮ್ಮ ಮೆಟ್ರೋ 74 ಕಿ.ಮೀ.ನಷ್ಟು ಸಂಚಾರ ನಡೆಸುತ್ತಿದ್ದು, ಈ ಮೂರು ಕಿ.ಮೀ. ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ 77.7 ಕಿ.ಮೀ ಸಂಚರಿಸಿದಂತಾಗುತ್ತದೆ.