ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2000 ಹಣವನ್ನ ಹಲವಾರು ಜನ ವಿವಿಧ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಗೃಹಲಕ್ಷ್ಮಿ ಹಣದಿಂದ ಸೊಸೆಗೆ ಅತ್ತೆ ಅಂಗಡಿಯೊಂದನ್ನು ತೆಗೆದು ಕೊಟ್ಟಿದ್ದರು. ನಂತರ ಒಂದು ಅಜ್ಜಿ ಇಡೀ ಗ್ರಾಮಕ್ಕೆ ಹಬ್ಬದ ಊಟ ಬಡಿಸಿದ್ದರು. ಹೀಗೆ ಗೃಹಲಕ್ಷ್ಮೀ ಹಣದಿಂದ ಅನೇಕ ಬದಲಾವಣೆ ಆಗಿದೆ. ಇಂತಹದ್ದೇ ಮತ್ತೊಂದು ಬೆಳವಣಿಗೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಹೌದು.. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಗೃಹಲಕ್ಷ್ಮೀ ಹಣದಿಂದ ಕೊಳವೆ ಬಾವಿ ಕೊರೆಸಿದ್ದಾರೆ. ಬೋರ್ವೆಲ್ನಲ್ಲಿ ಅವರಿಗೆ ನೀರು ಸಹ ಸಿಕ್ಕಿದೆ. ಈ ಬಗ್ಗೆ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಹರ್ಷ ವ್ಯಕ್ತಪಡಿಸಿದ್ದಾರೆ.
ಅತ್ತೆ ಹಾಗೂ ಸೊಸೆ ಸೇರಿ ಗೃಹಲಕ್ಷ್ಮಿ ಯೋಜನೆಯಿಂದ ದೊರೆತ 44 ಸಾವಿರ ರುಪಾಯಿಗಳನ್ನು ಕೊಳವೆ ಬಾವಿ ಕೊರೆಸಲು ನೀಡಿದ್ದಾರೆ. ಒಟ್ಟು 60 ಸಾವಿರ ರೂಪಾಯಿ ಕೊಳವೇ ಬಾವಿ ಕೊರೆಸಲು ಖರ್ಚು ಆಗಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯ 44 ಸಾವಿರ ರುಪಾಯಿ ಬಳಕೆ ಮಾಡಿದ್ದಾರೆ. ಇನ್ನುಳಿದ್ದ ಹಣವನ್ನ ತಮ್ಮ ಮಗ ನೀಡಿದ್ದಾನೆ ಎಂದು ಮಾಬುಬೀ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಗೃಹಲಕ್ಷ್ಮಿ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮಾಬುಬೀ ಹೇಳಿದ್ದಾರೆ.