ವಿಧಾನಸಭೆ ಚುನಾವಣೆಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಾರಂಭವಾದ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಯಶಸ್ವಿಯಾದವು. ಕರ್ನಾಟಕದ ಮಾದರಿಯ ಗ್ಯಾರಂಟಿ ಯೋಜನೆಗಳನ್ನ ಇತರೆ ರಾಜ್ಯಗಳು ಸಹ ಅನುಸರಿಸಿ ಅಧಿಕಾರಕ್ಕೆ ಬಂದಿದ್ದಾವೆ, ಕೆಲವು ಕಡೆ ಸೋತಿದ್ದಾವೆ. ಆದರೆ ಈ ರೀತಿಯ ಯೋಜನೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸೆಗೆ ತೀವ್ರವಾಗಿ ಪೆಟ್ಟು ಬೀಳುತ್ತಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನ ವಾಪಸ್ ಪಡೆಯುವ ನಿರ್ಧಾರಕ್ಕೆ ಬರಲಾಗಿದೆ.
ಜನರಿಗೆ ಉಚಿತ ಯೋಜನೆಗಳನ್ನು ನೀಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಲ್ಲಿರುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಇದೀಗ ವಿದ್ಯುತ್ ಸಬ್ಸಿಡಿ ವಾಪಸ್ ಅಭಿಯಾನ ಆರಂಭವಾಗಿದೆ. ಮುಖ್ಯಮಂತ್ರಿ ಸುಖೀಂದರ್ ಸಿಂಗ್ ಸುಖು ಅವರು ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ ವಿದ್ಯುತ್ ಸಬ್ಸಿಡಿ ವಾಪಸ್ ನೀಡಿದ್ದಾರೆ. ಅಲ್ಲದೇ ಇತರೆ ಅರ್ಹರಿಗೂ ಸಬ್ಸಿಡಿ ಯೋಜನೆಯಿಂದ ಹಿಂದೆ ಸರಿಯುವಂತೆ ಕರೆ ನೀಡಿದ್ದಾರೆ.
ಸುಖು ಅವರು ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ 5 ವಿದ್ಯುತ್ ಸಂಪರ್ಕಗಳಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ಹಿಂದಿರುಗಿಸಿದ್ದು, ಬಹುವಿದ್ಯುತ್ ಸಂಪರ್ಕವನ್ನು ಹೊಂದಿರುವ ಜನರು, ರಾಜ್ಯದ ಅಭಿವೃದ್ಧಿ ದೃಷ್ಟಿ ಯಿಂದ ಸಬ್ಸಿಡಿಯನ್ನು ವಾಪಸ್ ನೀಡು ವಂತೆ ಕೋರಿದ್ದಾರೆ. ಈಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ‘ಸರ್ಕಾರ ವಿದ್ಯುತ್ ಸಬ್ಸಿಡಿಗಾಗಿ ವಾರ್ಷಿಕ 2,200 ಕೋಟಿ ರುಪಾಯಿ ಖರ್ಚು ಮಾಡುತ್ತದೆ. ವಿದ್ಯುತ್ ಇಲಾಖೆಯ ನೌಕರರ ಸಂಬಳ ಮತ್ತು ಪಿಂಚಣಿಗಾಗಿ ತಿಂಗಳಿಗೆ 200 ಕೋಟಿ ರುಪಾಯಿ ಹಣ ಖರ್ಚು ಮಾಡುತ್ತಿದೆ.
ಸಬ್ಸಿಡಿ ಅಗತ್ಯ ಇರುವವರಿಗೆ ಮೀಸಲು. ಅನುಕೂಲಸ್ಥರು ರಾಜ್ಯದ ಅಭಿವೃದ್ಧಿ ಕಾರಣಕ್ಕೆ ವಾಪಸ್ ನೀಡಬೇಕು’ ಎಂದಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಲು ಈಗಾಗಲೇ ರಾಜ್ಯದಲ್ಲಿ ಹಲವು ವೆಚ್ಚಗಳಿಗೆ ಕಡಿವಾಣ ಹಾಕಿತ್ತು. ಸಿಎಂ. ಪಕ್ಷದ ಶಾಸಕರು, ಉನ್ನತ ಅಧಿಕಾ ರಿಗಳ ವೇತನ ಪಾವತಿಯಲ್ಲಿ ವಿಳಂಬ ವಾಗಿತ್ತು. ಅಲ್ಲದೇ ಕೆಲ ಸರ್ಕಾರಿ ಹೋಟೆಲ್ ಗಳನ್ನು ಕೂಡ ಮಾರಾಟ ಮಾಡಲಾ ಗಿತ್ತು. ಅನರ್ಹ ಶಾಸಕರಿಗೆ ಪಿಂಚಣಿ ನಿಲ್ಲಿಸುವ ನಿರ್ಧಾರ ಪ್ರಕಟಿಸಿತ್ತು. ಉದ್ಯಮ, ಹೋಟೆಲ್ಗಳಿಗೆ ನೀಡುವ ವಿದ್ಯುತ್ ಸಬ್ಸಿಡಿ ಕಡಿತ ಮಾಡಲಾಗಿತ್ತು.
ಇದೀಗ ರಾಜ್ಯದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನ ಅವಲೋಕಿಸಿ ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ಯೋಜನೆಗಳನ್ನ ಸ್ವಯಂ ಪ್ರೇರಿತರಾಗಿ ಕೈ ಬಿಡಲು ರಾಜ್ಯ ಸರ್ಕಾರ ಮನವಿ ಮಾಡಿದೆ. ಇನ್ನೂ ನಮ್ಮ ರಾಜ್ಯದಲ್ಲಿಯೋ ಅಭಿವೃದ್ದಿಗೆ ಹಣ ಸಾಕಾಗುತ್ತಿಲ್ಲ ಎಂದು ಹಲವಾರು ಶಾಸಕರು ಬಹಿರಂಗವಾಗಿ ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಯಾವಾಗ ಇಂತಹ ಅಭಿಯಾನ ಶುರುವಾಗುತ್ತದೆಯೋ ಇನ್ನೂ ತಿಳಿದುಬಂದಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಬಹಿರಂಗ ವೇದಿಕೆಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಆದರೂ ಸಹ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಏರುಪೇರು ಆಗಿರುವುದಂತು ನಿಜ.