ಯುವಕನೊಬ್ಬ ಚಾಕುವಿನಲ್ಲಿ ತನ್ನ ಕೈಯಲ್ಲಿನ ಬೆರಳುಗಳನ್ನ ತಾನೇ ಕಟ್ ಮಾಡಿಕೊಂಡಿರುವ ವಿಚಿತ್ರ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಈತ ಬೆರಳುಗಳನ್ನು ಕತ್ತರಿಸಿಕೊಂಡ ಕಾರಣ ತಿಳಿದು ಪೊಲೀಸರು ಒಂದು ಕ್ಷಣ ಶಾಕ್ ಆಗಿದ್ದಾರೆ. ಈತ ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದೇನು ಗೊತ್ತಾ? ಈ ಮುಂದಿನ ಸ್ಟೋರಿ ನೋಡಿ.
ಮಯೂರ್ ತರಪಾರ್ (31) ಎಂಬುವಾತ ತನ್ನ ಎಡಗೈಯಲ್ಲಿರುವ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ. ಇದರ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ತಾನು ಮೂರ್ಛೆ ಹೋಗಿದ್ದೆ, ಎದ್ದು ನೋಡಿದಾಗ ಬೆರಳುಗಳು ಕಾಣಲೇ ಇಲ್ಲ ಎಂದು ತಿಳಿಸಿದ್ದ. ಇದರ ಮೇಲೆ ನಂಬಿಕೆ ಬರದ ಪೊಲೀಸರು ಮತ್ತೆ ವಿಚಾರಣೆಯನ್ನ ತೀವ್ರಗೊಳಿಸಿದ್ದಾರೆ. ಆಗ ಸತ್ಯವನ್ನು ಬಿಚ್ಚಿಟ್ಟಿದ್ದಾನೆ.
ಮಯೂರ್ ಸೂರತ್ನ ವಜ್ರ ವ್ಯಾಪಾರದ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈ ಸಂಸ್ಥೆ ಮಯೂರ್ ಅವರ ಸೋದರ ಸಂಬಂಧಿಯದ್ಧೇ ಆಗಿತ್ತು. ಆದರೆ ಈ ಕೆಲಸ ಮಾಡಲು ಆತನಿಗೆ ಇಷ್ಟವಿಲ್ಲದ ಕಾರಣ ತನ್ನ ಎಡಗೈನ ನಾಲ್ಕು ಬೆರಳುಗಳನ್ನು ಚಾಕುವಿನಿಂದ ತಾನೇ ಕತ್ತರಿಸಿಕೊಂಡಿದ್ದಾನೆ. ಬೆರಳುಗಳೇ ಇಲ್ಲದೇ ಕಂಪ್ಯೂಟರ್ ಆಪರೇಟ್ ಮಾಡಲು ಸಾಧ್ಯವಿಲ್ಲ. ಇದರಿಂದ ತನ್ನನ್ನು ಕೆಲಸದಿಂದ ತೆಗೆದುಹಾಕುತ್ತಾರೆ ಎಂಬ ಉದ್ದೇಶದಿಂದಲೇ ಈ ಕೃತ್ಯ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನ ತನ್ನ ಸೋದರ ಸಂಬಂಧಿಗೆ ಹೇಳುವ ಧೈರ್ಯವೂ ಇರಲಿಲ್ಲ ಎಂದು ಸೂರತ್ನ ಕ್ರೈಂ ಬ್ರ್ಯಾಂಚ್ ಪೋಲೀಸರ ಬಳಿ ತಾನೇ ಒಪ್ಪಿಕೊಂಡಿದ್ದಾನೆ.