ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಸೋಲಿಸಿದಂತೆ ನಾವು ಗುಜರಾತ್ನಲ್ಲೂ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಹಮದಾಬಾದ್ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು.
ಬಿಜೆಪಿಯವರು ನಮಗೆ ಬೆದರಿಕೆ ಹಾಕಿ, ನಮ್ಮ ಕಚೇರಿಗೆ ಹಾನಿ ಮಾಡುವ ಮೂಲಕ ಸವಾಲು ಹಾಕಿದ್ದಾರೆ. ನಮ್ಮ ಕಚೇರಿಗೆ ಹಾನಿ ಮಾಡಿದಂತೆ ನಾವು ಅವರ ಸರ್ಕಾರವನ್ನು ಕಿತ್ತೊಗೆಯಲಿದ್ದೇವೆ. ಅಯೋಧ್ಯೆಯಲ್ಲಿ ಸೋಲಿಸಿದಂತೆ ಗುಜರಾತ್ನಲ್ಲಿ ಬಿಜೆಪಿ ಹಾಗೂ ಮೋದಿಯನ್ನು ನಾವು ಸೋಲಿಸಲಿದ್ದೇವೆ ಎಂದಿದ್ದಾರೆ.
ಲೋಕಸಭೆಯಲ್ಲಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಅಹಮದಾಬಾದ್ನ ಕಾಂಗ್ರೆಸ್ ಕಚೇರಿ ‘ರಾಜೀವ್ ಗಾಂಧಿ’ ಭವನದ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಈ ವಿಚಾರವನ್ನು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
“ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಸ್ಥಳೀಯ ಯಾವೊಬ್ಬ ವ್ಯಕ್ತಿಯನ್ನೂ ಆಹ್ವಾನಿಸದಿರುವುದು ಅಲ್ಲಿನ ಜನರಿಗೆ ಕೋಪ ತರಿಸಿದೆ. ಅಯೋಧ್ಯೆಯಿಂದ ಸ್ಪರ್ಧೆ ಮಾಡಲು ನರೇಂದ್ರ ಮೋದಿ ಬಯಸಿದ್ದರು. ಆದರೆ, ಅಲ್ಲಿಂದ ಸ್ಪರ್ಧಿಸಿದರೆ ಸೋಲುವುದಾಗಿ ಸಮೀಕ್ಷೆಗಳು ಹೇಳಿದ್ದವು. ಹಾಗಾಗಿ, ಅಯೋಧ್ಯೆಯ ಸ್ಪರ್ಧೆಯಿಂದ ಮೋದಿ ಹೊಂದೆ ಸರಿದಿದ್ದರು” ಎಂದು ರಾಹುಲ್ ಹೇಳಿದ್ದಾರೆ.