ಗುಜರಾತ್ ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೆ, ಸ್ಪಿನ್ನೆರ್ ರಾಧಾ ಯಾದವ್, ಬುಧವಾರ ತಮ್ಮ ಇನ್ಸ್ಟ್ರಾಗ್ರಾಮ್ ಸ್ಟೋರಿ ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದು, ಅವರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದನ್ನು ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್)ಯು ರಾಧಾ ಯಾದವ್ ಅವರ ನೆರವಿಗೆ ಧಾವಿಸಿದ್ದು ರಕ್ಷಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಅವರು ಹಂಚಿಕೊಂಡ ವೀಡಿಯೊದಲ್ಲಿ ಕಟ್ಟಡಗಳು, ರಸ್ತೆಗಳು ಮತ್ತು ವಾಹನಗಳು ಜಲಾವೃತವಾಗಿರುವುದರಿಂದ NDRF ಅಧಿಕಾರಿಗಳು ದೋಣಿಯಲ್ಲಿ ಕೆಲವು ಜನರನ್ನು ರಕ್ಷಣೆ ಮಾಡುತ್ತಿರುವುದು ಕಾಣಬಹುದು.
ಗುಜರಾತ್ ಹಲವು ನಗರಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹದಂತಹ ಪರಿಸ್ಥಿತಿಗೆ ಕಾರಣವಾಗಿದೆ ವಡೋದರದಲ್ಲಿ ಮಳೆ ಕಡಿಮೆಯಾಗಿದ್ದರೂ ವಿಶ್ವಾಮಿತ್ರಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು ತಗ್ಗು ಪ್ರದೇಶದಲ್ಲಿರುವ ವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಪ್ರವಾಹ ಉಂಟಾಗಿದೆ. ಈ ಹಿಂದೆ ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಬರೋಡಾದ ಜನರನ್ನು ಮನೆಯೊಳಗೆ ಇರುವಂತೆ ವಿನಂತಿಸಿದರು.
“ಸುರಕ್ಷಿತವಾಗಿರು ಬರೋಡಾ ಪ್ರವಾಹ ಇರುವುದರಿಂದ ದಯವಿಟ್ಟು ನಿಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರಿ” ಎಂದು ಪಠಾಣ್ ಬರೆದಿದ್ದಾರೆ.ಬುಧವಾರ, ಸೌರಾಷ್ಟ್ರ ಪ್ರದೇಶದ ಜಿಲ್ಲೆಗಳಾದ ದೇವಭೂಮಿ ದ್ವಾರಕಾ, ಜಾಮ್ನಗರ, ರಾಜ್ಕೋಟ್ ಮತ್ತು ಪೋರಬಂದರ್ನಲ್ಲಿ 12 ಗಂಟೆಗಳ ಅವಧಿಯಲ್ಲಿ ಸುಮಾರು 200 ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ದೇವಭೂಮಿ ದ್ವಾರಕಾ ಜಿಲ್ಲೆಯ ಭನ್ನಾಡ್ ತಾಲೂಕಿನಲ್ಲಿ 185 ಮಿ.ಮೀ. ಮಳೆಯಾಗಿದ್ದು ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ (MD) ಗುರುವಾರ ಸೌರಾಷ್ಟ್ರದ ಜಿಲ್ಲೆಗಳ ಪ್ರತ್ಯೇಕ ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ವಡೋದರಾ ನಗರದಲ್ಲಿ ತಮ್ಮ ಮನೆಗಳು ಮತ್ತು ಮೇಲಾವಣಿಗಳಲ್ಲಿ ಸಿಲುಕಿರುವ ಜನರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಸೇನೆಯ ತಂಡಗಳು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.