ಚುನಾವಣಾ ಸಾಲಕ್ಕಾಗಿ ಸೈಟು ಮಾರಾಟ ಮಾಡಿದ್ದರಲ್ಲ ಅದು ಎಲ್ಲಿಂದ ಬಂತು? ಇದು 14 ಸೈಟ್ ಪ್ರಕರಣಕ್ಕಿಂತ ದೊಡ್ಡ ಪ್ರಕರಣ ಎಂದು ಹೆಚ್ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರಿನ ಹಿನಕಲ್ ಗ್ರಾಮ ಪಂಚಾಯತ್ನಲ್ಲಿ ಬಡವರ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿ ಡಿನೋಟಿಫಿಕೇಷನ್ ಮಾಡಿಸಿಕೊಂಡು ಅದನ್ನು ಸಿದ್ದರಾಮಯ್ಯ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಮೊದಲ ಆರೋಪಿ. ಒಟ್ಟು 18 ಮಂದಿ ಆರೋಪಿಗಳಿದ್ದಾರೆ. ಕೆಳಹಂತದ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ತೀರ್ಪು ನೀಡಿತ್ತು. ಅಷ್ಟೇ ಅಲ್ಲದೇ ತನಿಖೆ ನಡೆಸುವಂತೆ ಆದೇಶಿಸಿತ್ತು ಎಂದು ಹೇಳಿದರು.
ಈ ಆದೇಶವನ್ನು ಸಿದ್ದರಾಮಯ್ಯ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು. ಹೈಕೋರ್ಟ್ನಲ್ಲಿ ಸಿದ್ದರಾಮಯ್ಯನವರಿಗೆ ರಿಲೀಫ್ ಸಿಕ್ಕಿತ್ತು. ಈ ರಿಲೀಫ್ ಕೊಟ್ಟವರು ನ್ಯಾ. ಮೈಕೆಲ್ ಡಿ ಕುನ್ಹಾ. ನ್ಯಾಯಮೂರ್ತಿಗಳ ಆದೇಶದ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಈ ನ್ಯಾಯಧೀಶರು ಈಗ ಕರ್ನಾಟಕದಲ್ಲಿನ ಕೋವಿಡ್ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಈ ಪ್ರಕರಣ 14 ಸೈಟ್ಗಿಂತಲೂ ದೊಡ್ಡದು. ಊರಿಗೆ ಬುದ್ದಿ ಹೇಳುವವರು ಇಲ್ಲಿ ಏನೇನು ಮಾಡಿದ್ದೀರಿ. ಈಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಇನ್ನು ಎರಡು ಪ್ರಕರಣಗಳಿವೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದೂರುದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅರ್ಜಿದಾರರ ಒಬ್ಬರು ವಕೀಲರು ಮೃತಪಟ್ಟರೆ ಇನ್ನೊಬ್ಬರು ಜಡ್ಜ್ ಆಗಿ ನೇಮಕವಾಗಿದ್ದಾರೆ. ಸದ್ಯ ಈ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ ಎಂದು ಹೇಳಿದರು.
ಕೃಷ್ಣ ಬೈರೇಗೌಡ ಮೇಧಾವಿಯಲ್ವ ಇದನ್ನು ಪರಿಶೀಲನೆ ಮಾಡಪ್ಪ. ನಾನು ಇಂತಹ ಕೆಲಸ ಮಾಡಿಲ್ಲ. ಸಮಸ್ಯೆ ಬಂದಿದ್ದಕ್ಕೆ ಚುನಾವಣಾ ಖರ್ಚಿನ ಹೆಸರಿನಲ್ಲಿ ಈ ಜಾಗವನ್ನು ಮಾರಾಟ ಮಾಡಿದ್ದಾರೆ. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯುವುದು. ಈಗ ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮನ್ನು ಮುಗಿಸಲು ಬಂದಿದ್ದಾರೆ ಎಂದು ಕಿಡಿಕಾರಿದರು.
1988ರಲ್ಲಿ ಮುಡಾ ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ 535 ಎಕರೆ ಪ್ರದೇಶವನ್ನು ವಶಪಡಿಸಿಕೊಂಡಿತ್ತು. 10 ವರ್ಷಗಳ ಬಳಿಕ ಬಡಾವಣೆ ರಚನೆಗೊಂಡು ನಿವೇಶನ ಹಂಚಿಕೆ ಮಾಡಿತ್ತು. ಈ ಹಂಚಿಕೆ ವೇಳೆ ಅಕ್ರಮ ನಡೆದ ವಿಚಾರವನ್ನು ಹೆಚ್ಡಿ ಕುಮಾರಸ್ವಾಮಿ ಇಂದಿನ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪ ಮಾಡಿ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.