ಹೊಸದಿಲ್ಲಿ: ಇಸ್ರೇಲ್ನಲ್ಲಿ ಮಾರಣಹೋಮಕ್ಕೆ ಕಾರಣವಾದ ಹಮಾಸ್ ಉಗ್ರ ಸಂಘಟನೆ ಈಗ ಭಾರತದ ಮಗ್ಗುಲಿಗೆ ಬಂದು ಕುಳಿತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಯಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳು ಆಯೋಜಿಸಿದ ಸಭೆಯಲ್ಲಿ ಹಮಾಸ್ ನಾಯಕ ಖಾಲಿದ್ ಕ್ಯಾದೋಮಿ ಭಾಗವಹಿಸಿದ್ದು, ಉಗ್ರರಿಗೆ ಭಾಷಣ ಮಾಡಿದ್ದಾರೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಪಾಕಿಸ್ತಾನದಲ್ಲಿ ಪ್ರತಿವರ್ಷ ಆಚರಿಸಲಾಗುವ “ಕಾಶ್ಮೀರ ಒಗ್ಗಟ್ಟಿನ ದಿನಾಚರಣೆ” ಅಂಗವಾಗಿ ಪಾಕ್ ಆಕ್ರಮಿತ ಕಾಶ್ಮೀರದ ರಾವಲ್ಕೋಟೆಯ ಶಹೀದ್ ಶಬೀರ್ ಮೈದಾನದಲ್ಲಿ ಜೆಎಐಎಮ್ ಮತ್ತು ಎಲ್ಇಟಿ ಸಂಘಟನೆಗಳು ಸಭೆಯನ್ನು ಆಯೋಜಿಸಿದ್ದವು. ಈ ಸಭೆಯಲ್ಲಿ ಹಮಾಸ್ ನಾಯಕ ಖಾಲಿದ್ ಕ್ಯಾದೋಮಿ ಭಾಗವಹಿಸಿ, ಉಗ್ರರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ ಎಂದು ಭಾರತದ ಗುಪ್ತಚರ ಮೂಲಗಳು ತಿಳಿಸಿವೆ.
ಜೆರುಸಲೇಂನಲ್ಲಿರುವ ವಿವಾದಿತ ಮಸೀದಿ “ಅಲ್ ಅಕ್ಸಾ ಫ್ಲಡ್” ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಮಸೀದಿಯನ್ನು ಯಹೂದಿ ಮತ್ತು ಮುಸ್ಲಿಮರು ತಮ್ಮ ಅಧಿಕಾರಕ್ಕೆ ಸೆಳೆದುಕೊಳ್ಳಲು ಹೋರಾಡುತ್ತಿದ್ದಾರೆ. ಈ ಹೆಸರಿನಲ್ಲಿ ಹಮಾಸ್ ಇಸ್ರೇಲ್ನಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದೆ.
ಯಾರು ಈ ಖಾಲಿದ್?
ಖಾಲಿದ್ ಕ್ಯಾದೋಮಿ ಇರಾನ್ನಲ್ಲಿರುವ ಹಮಾಸ್ ನಾಯಕನಾಗಿದ್ದು, ತನ್ನ ಉಗ್ರ ಭಾಷಣಗಳಿಂದ ಹೆಸರು ಗಳಿಸಿದ್ದಾನೆ. ಉಗ್ರವಾದದತ್ತ ಯುವಕರನ್ನು ಸೆಳೆಯುವುದರಲ್ಲಿ ಈತ ಹೆಚ್ಚು ಚಾಲಾಕಿಯಾಗಿದ್ದಾನೆ. ಉಗ್ರ ಸಂಘಟನೆಗೆ ಯುವಕರನ್ನು ಸೇರ್ಪಡೆ ಮಾಡುವುದು ಮತ್ತು ಹಣಕಾಸಿನ ನೆರವು ಒದಗಿಸುವುದು ಇವನ ಪ್ರಮುಖ ಚಟುವಟಿಕೆಗಳು.
ಪರಿಣಾಮಗಳು:
- ಹಮಾಸ್ ಉಗ್ರರ ನಂಟಿನಿಂದ ಕಾಶ್ಮೀರದಲ್ಲಿ ಉಗ್ರವಾದದ ಪ್ರಮಾಣ ಹೆಚ್ಚಳ ಸಾಧ್ಯತೆ.
- ಜಾಗತಿಕ ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲ ಮತ್ತಷ್ಟು ಬಲಪಡೆಯುವ ಸಾಧ್ಯತೆ.
- ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಯುವಕರು ಭಯೋತ್ಪಾದನಾ ತಂತ್ರಗಳಿಗೆ ಬಲಿಯಾಗುವ ಸಾಧ್ಯತೆ.
- ಭಾರತದ ಗಡಿಗಳಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಬೇಕಾದ ಅನಿವಾರ್ಯತೆ.
ಈ ಬೆಳವಣಿಗೆಗಳು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭಯೋತ್ಪಾದನೆ ತಡೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc