ಹರಿಯಾಣದಲ್ಲಿ ವಿಧಾನಸಭಾ ಕ್ಷೇತ್ರದ ಬಿರುಸು ಪ್ರಚಾರ ಆರಂಭವಾಗಿದೆ. ರಾಜಕೀಯ ಪಕ್ಷಗಳು ಒಂದೊಂದಾಗಿ ಟಿಕೆಟ್ ಫೈನಲ್ ಆದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿವೆ. ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಈ ಪೈಕಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಭಾರತದ ಶ್ರೀಮಂತ ಮಹಿಳೆಯೊಬ್ಬರು ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದಾರೆ.
ಬಿಜೆಪಿಯ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಸಂಸದ ನವೀನ್ ಜಿಂದಾಲ್ ಅವರ ತಾಯಿ ಸಾವಿತ್ರಿ ಜಿಂದಾಲ್ ಅವರು ಬಿಜೆಪಿಯಿಂದ ತಮಗೆ ಟಿಕೆಟ್ ಸಿಗಬಹುದು ಎಂಬ ಆಶಯ ಹೊಂದಿದ್ದರು. ಆದರೆ ಸಿಗದ ಕಾರಣ ಸಾವಿತ್ರಿ ಜಿಂದಾಲ್ ಅವರು ಗುರುವಾರ ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
74 ವರ್ಷದ ಶ್ರೀಮತಿ ಸಾವಿತ್ರಿ ಅವರು ಹೆಸರಾಂತ ಕೈಗಾರಿಕೋದ್ಯಮಿ ದಿ. ಓಪಿ ಜಿಂದಾಲ್ ಅವರ ಪತ್ನಿ. ಹರಿಯಾಣದ ಸಚಿವ ಮತ್ತು ಹಿಸಾರ್ನ ಹಾಲಿ ಶಾಸಕ ಕಮಲ್ ಗುಪ್ತಾ ವಿರುದ್ಧ ಅಖಾಡಕ್ಕೆ ಧುಮುಕಿದ್ದಾರೆ. ಫೋರ್ಬ್ಸ್ ಇಂಡಿಯಾ ವರದಿ ಪ್ರಕಾರ, ಈ ವರ್ಷ 29.1 ಬಿಲಿಯನ್ ಯುಎಸ್ಡಿ ನಿವ್ವಳ ಲಾಭ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂದು ತಿಳಿಸಿದೆ.