ಸಕಲೇಶಪುರ – ಸುಬ್ರಹ್ಮಣ್ಯ ರೈಲು ನಿಲ್ದಾಣಗಳ ನಡುವಿನ ಭೂಕುಸಿತದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಗುರುವಾರ ಯಶವಂತಪುರ-ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲು ಈ ಮಾರ್ಗದಲ್ಲಿ ಸಂಚರಿಸಿದೆ. ಈ ಮೂಲಕ ಬೆಂಗಳೂರು – ಮಂಗಳೂರು ನಡುವಿನ ರೈಲು ಸಂಚಾರ ಆರಂಭವಾಗಿದೆ.
ಕಡಗರವಳ್ಳಿ ಮತ್ತು ಯಡಕುಮೇರಿ ನಡುವಿನ ರೈಲು ಮಾರ್ಗದ ಕೆಳಬದಿಯಲ್ಲಿ ಭೂಕುಸಿತದಿಂದ ರೈಲು ಸಂಚಾರ ಸ್ಥಗಿತವಾಗಿತ್ತು. ನಿರಂತರ ಮಳೆಯ ನಡುವೆಯೂ ಕ್ರಿಬ್ ಗೋಡೆ, ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗಿದೆ.
ಆಗಸ್ಟ್ 4 ರಂದು ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ರೈಲಿನ ಎಂಜಿನ್ ಓಡಿಸುವ ಮೂಲಕ ಸುರಕ್ಷತೆ ಪರಿಶೀಲಿಸಲಾಯಿತು. ಆಗಸ್ಟ್ 6 ರಂದು ಪೂರ್ಣ ಸಾಮಾಗ್ರಿ ಹೊತ್ತ ಗೂಡ್ಸ್ ರೈಲು ಈ ಮಾರ್ಗದಲ್ಲಿ ಯಶಸ್ವಿಯಾಗಿ ಸಂಚರಿಸಿದೆ. ಈ ಸ್ಥಳಕ್ಕೆ ರೈಲಿನ ವೇಗದ ಮಿತಿಯನ್ನು 15 ಕಿ.ಮೀ ನಿಗದಿಗೊಳಿಸಲಾಗಿದೆ.
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಲ್ಲಿ ಇಟ್ಟುಕೊಂಡು ರೈಲು ಮಾರ್ಗವನನು ತ್ವರಿತಗತಿಯಲ್ಲಿ ದುರಸ್ತಿ ಮಾಡಿರುವುದಕ್ಕೆ ನೈರುತ್ಯ ರೈಲ್ವೆ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ, ಉಪ ಮಹಾಪ್ರಬಂಧಕ ಕೆ.ಎಸ್ ಜೈನ್ ಹರ್ಷ ವ್ಯಕ್ತಪಡಿಸಿದ್ದಾರೆ.