- ಮತದಾರರು ದೇಶದ ಸುಭದ್ರತೆಗಾಗಿ ಮತ ಹಾಕಿದ್ದಾರೆ
- ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಭಾಗಿ
ಹಾವೇರಿ: ಕಾಂಗ್ರೆಸ್ ಸರ್ಕಾರದ ಖಜಾನೆಯ ದುರುಪಯೋಗ, ಅಧಿಕಾರದ ದುರುಪಯೋಗ, ಅಪಪ್ರಚಾರದ ನಡುವೆಯೂ ಮತದಾರರು ದೇಶದ ಸುಭದ್ರತೆಗಾಗಿ ಮತ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿ ಪಟ್ಟಣದ ಹುಕ್ಕೇರಿಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಏರ್ಪಡಿಸಿದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ, ಮತದಾರರಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಕಾರ್ಯಕ್ರಮದ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು. ಈ ಸನ್ಮಾನ, ಅಭಿನಂದನೆ ನನಗಲ್ಲಾ, ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೆ ಸೇರಬೇಕು. ಮತದಾರರು ಮೇ 7ರಂದೇ ಮತ ದಾನ ಮಾಡುವ ಮೂಲಕ ಕೋಟಿ ಕೋಟಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಈ ಚುನಾವಣೆ ಬಹಳ ವಿಭಿನ್ನವಾಗಿತ್ತು. ಮತದಾರರ ಪ್ರಬುದ್ಧತೆ ಪ್ರಶ್ನಿಸುವ ಚುನಾವಣೆ ಆಗಿತ್ತು. ಈ ಚುನಾವಣೆಯಲ್ಲಿ ಯಾರು ಗೆದ್ದಿದ್ದಾರೆ, ಯಾರು ಸೋತಿದ್ದಾರೆ ಎಂದು ವಿಶ್ಲೇಷಣೆ ಮಾಡಿದರೆ ಮತದಾರರು ಗೆದ್ದಿದ್ದಾರೆ. ಕಾಂಗ್ರೆಸ್ ಬಹಳ ಹತಾಸೆ ಆಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೂ ಸಹ ಲೋಕಸಭೆ ಗೆಲ್ಲುವ ವಿಶ್ವಾಸ ಇರಲಿಲ್ಲ, ಹೀಗಾಗಿ ಸಾಕಷ್ಟು ತಂತ್ರಗಾರಿಕೆ ಮಾಡಿದರು. ಜನರ ತೆರಿಗೆ ಹಣವನ್ನು ಬಹಿರಂಗವಾಗಿ ದುರುಪಯೋಗ ಮಾಡಿಕೊಂಡಿತು. ಚುನಾವಣೆ ಆಯೋಗ ಗಮನಿಸಬೇಕಿತ್ತು. ಆದರೆ, ಆಯೋಗ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮತದಾನ ಎರಡು ದಿನ ಮುಂದಿರವಾಗ 2 ತಿಂಗಳ ಗ್ಯಾರಂಟಿ ಯೋಜನೆಯ ಹಣ ಮಹಿಳೆಯರಿಗೆ ಖಾತೆಗೆ ಹಾಕಿದರು. ಒಂದು ತಿಂಗಳು ಅಡ್ವಾನ್ಸ್ ಹಣ ಕೊಟ್ಟರು. ಮತದಾನದ ಎರಡು ದಿನ ಮೊದಲು ಹಣ ಹಾಕುವುದು ಸಣ್ಣ ಮಾತಲ್ಲ, ಜನರ ದುಡ್ಡನ್ನು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಹಿಂದೆ ಯಾವುದೇ ಸರ್ಕಾರ ಹೀಗೆ ಮಾಡಿರಲಿಲ್ಲ, ಆದರೂ ಜನ ಅವರಿಗೆ ಮತ ಕೊಡಲಿಲ್ಲ ಎಂದು ಹೇಳಿದರು.
ನಮ್ಮ ಹಣವನ್ನೇ ನಮಗೆ ಕೊಡುತ್ತಾರೆ ಎಂಬ ಅರಿವು ಜನರಿಗೆ ಗೊತ್ತಾಗಿದೆ. ಹಣದುಬ್ಬರ ಹೆಚ್ಚಾಗಿದೆ. ಜನರು ಕೊಂಡುಕೊಳ್ಳುವ ಎಲ್ಲಾ ಧಾರಣೆಗಳ ಬೆಲೆ ಗಗನಕ್ಕೇರಿದೆ. ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಬಾಂಡ್, ಮೋಟಾರು ವೆಹಿಕಲ್ ಟ್ಯಾಕ್ಸ್, ವಿದ್ಯುತ್ ಬೆಲೆ, ಹಾಲು, ಮದ್ಯ, ಈಗ ತೈಲ ಬೆಲೆ ಏರಿಕೆ ಮಾಡಿದ್ದಾರೆ. ರೈತರನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದಾರೆ. ಬರಗಾಲ ಬಂದರೂ ಪರಿಹಾರ ಕೊಟ್ಟಿಲ್ಲ, ಕೇಂದ್ರ ಕೊಟ್ಟಿದ್ದನ್ನೂ ಇನ್ನೂ ಸರಿಯಾಗಿ ಕೊಟ್ಟಿಲ್ಲ. ನಮ್ಮ ಸರ್ಕಾರ ಇದ್ದಾಗ ಕೇಂದ್ರ ಕೊಟ್ಟಿದ್ದಕ್ಕಿಂದ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವು. ಸರ್ಕಾರದ ಆಸ್ತಿ ಮಾರಾಟಕ್ಕೆ ಇಟ್ಟಿದ್ದಾರೆ. ಕರ್ನಾಟಕವನ್ನು ದಿವಾಳಿ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 25 ಕೋಟಿ ರೂ. ಕೊಡುತ್ತೇವೆ ಅಂತ ಹೇಳಿದ್ದರು. ನಯಾಪೈಸೆ ಕೊಟ್ಟಿಲ್ಲ, ಜನರು ಬೆವರು ಸುರಿಸಿ ದುಡಿದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಖರ್ಚು ಮಾಡಬೇಕು. ಇದಕ್ಕಾಗಿ ಹೋರಾಟ ಮಾಡೋಣ ಎಂದು ಹೇಳಿದರು.