ಹಾವೇರಿ: ಬಸವರಾಜ ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರಕ್ಕೆ ಮಾಡಿರುವಂತಹ ಅಭಿವೃದ್ಧಿ ಕೆಲಸಗಳು ಇನ್ನೂ ಮುಂದುವರೆಯಬೇಕೆಂಬ ಉದ್ದೇಶದಿಂದ ಉಪಚುನಾವಣೆಗೆ ಭರತ್ ಬೊಮ್ಮಾಯಿಯನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಚನ್ನಮ್ಮ ಬಸವರಾಜ ಬೊಮ್ಮಾಯಿ ಹೇಳಿದರು.
ತಮ್ಮ ಪುತ್ರ ಹಾಗೂ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಚುನಾವಣೆ ಪ್ರಚಾರ ನಡೆಸಿ ಮಹಿಳಾ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಟೆಕ್ಸಟೈಲ್ಸ್ ಹಾಗೂ ಗಾರ್ಮೆಂಟ್ಸ್ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಬರಲು ಭರತ್ ಬೊಮ್ಮಾಯಿನೇ ಕಾರಣನಾಗಿದ್ದಾನೆ. ಅವನೇ ಇಲ್ಲಿನ ಮಹಿಳೆಯರು ಅಭಿವೃದ್ಧಿಯಾಗಬೇಕೆಂದು ಓಡಾಡಿ ಕೆಲಸ ಮಾಡಿದ್ದಾನೆ. ರಸ್ತೆ ಅಭಿವೃದ್ಧಿ, ಮನೆಮನೆಗೆ ಕುಡಿಯುವ ನೀರು, ಮಹಿಳೆಯರಿಗೆ ಉದ್ಯೋಗ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಬಸವರಾಜ ಬೊಮ್ಮಾಯಿ ಮಾಡಿದ್ದಾರೆ. 2008ಕ್ಕಿಂತ ಮೊದಲಿದ್ದ ಶಿಗ್ಗಾವಿ ಈಗಿಲ್ಲ. ಬಸವರಾಜ ಬೊಮ್ಮಾಯಿಯವರು ಈಗ ಸಂಸದಾಗಿದ್ದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ನಿಲ್ಲಬಾರದೆಂಬ ಉದ್ದೇಶವಿದೆ. ಬಸವರಾಜ ಬೊಮ್ಮಾಯಿಯವರನ್ನು ಕೈಹಿಡಿದಂತೆ ಈಗ ಮಹಿಳೆಯರು ಸೇರಿದಂತೆ ಎಲ್ಲರೂ ಭರತ್ ಬೊಮ್ಮಾಯಿಯನ್ನು ಕ್ಷೇತ್ರದ ಮತದಾರರರು ಕೈಹಿಡಿಯಬೇಕು ಎಂದು ಮನವಿ ಮಾಡಿದರು.