ಹಾವೇರಿ: ಹಾವೇರಿ ಗದಗ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ದಿ ಮಾಡಲಾಗುವುದು ಎಂದು ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಗೆಲುವಿಗೆ ಕಾರಣರಾದ ಹಾವೇರಿ ಗದಗ ಜಿಲ್ಲೆಗಳ ಜನರಿಗೆ ಕೋಟಿ ಕೋಟಿ ನಮನಗಳು, ಮಹಾಜನತೆಯ ಆಶೀರ್ವಾದದಿಂದ ಈ ಗೆಲುವು ಸಾಧಿಸಿದ್ದೇನೆ ಎಂದು ಹೇಳಿದರು. ಈಗಾಗಲೇ ಸಂದೇಶ ಬಂದಿದೆ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲಾಗುವುದು. ದೆಹಲಿಯಿಂದ ಬಂದ ಮೇಲೆ ದೊಡ್ಡ ಪ್ರಮಾಣದಲ್ಲಿ ಮೆರವಣಿಗೆ ಮಾಡೋಣ. ನೀವು ಇಟ್ಟಿರುವ ನಂಬಿಕೆಗೆ ತಕ್ಕಹಾಗೆ ಕೆಲಸ ಮಾಡುತ್ತೇನೆ. ಮಹಿಳೆಯರ ರಕ್ಷಣೆ. ಮಾಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇರಬಹುದು. ನಮ್ಮ ಬಳಿ ಜನ ಶಕ್ತಿ ಇದೆ. ಜನಶಕ್ತಿ, ರಾಜಶಕ್ತಿ ನಡುವೆ ಸಂಘರ್ಷ ಬಂದಾಗ ಜನಶಕ್ತಿ ಗೆಲ್ಲುತ್ತದೆ. ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಸುಮ್ಮನೆ ಬಿಡುವುದಿಲ್ಲ. ನಮ್ಮ ಕಾರ್ಯಕರ್ತರಿಗೆ ವಿನಾಕಾರಣ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ತುಂಬು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.