ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಕೆಂಗೇರಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಜೈಲಿಗೆ ಹೋಗಲು ಸಿದ್ಧ ಎಂದು ಅವರೇ ನಿನ್ನೆ ಹೇಳಿದ್ದಾರೆ. ರಾಜಕಾರಣಕ್ಕೆ ಬರುವ ಮುಂಚೆ ಅವರ ಆಸ್ತಿ ಏನಿತ್ತು ಎಂಬುದನ್ನು ಅವರ ಗುರುಗಳು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಬ್ಲಾಕ್ ಅಂಡ್ ವೈಟ್ ಟಿವಿ ಮತ್ತು ಡಿವಿಡಿ ಇಟ್ಟುಕೊಂಡು ದೊಡ್ಡಾಲಹಳ್ಳಿ ಮತ್ತು ಕೋಡಿ ಹಳ್ಳಿಯಲ್ಲಿ ಏನು ಪ್ರದರ್ಶನ ಮಾಡುತ್ತಿದ್ದರು, ಅದರಿಂದ ಏನು ಹಣ ಸಂಪಾದನೆ ಮಾಡುತ್ತಿದ್ದರು ಎಂಬುದಾಗಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಪಾದಯಾತ್ರೆಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಮಾತ್ರ ಇಲ್ಲ. ನಾಡಿನ ಜನರ ಅಭಿಪ್ರಾಯ ಇಲ್ಲಿದೆ. ನಿನ್ನೆ ಬಿಡದಿಯಲ್ಲಿ ಕಾಂಗ್ರೆಸ್ನವರು ನನಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಪ್ರಶ್ನೆಗಳಿಗೆ ಬಿಡದಿ, ರಾಮನಗರದಲ್ಲಿ ಉತ್ತರ ಕೊಡುತ್ತೇನೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.