ಇತ್ತೀಚೆಗೆ ಬೆಂಗಳೂರಿನಲ್ಲಿ ಗಂಡಸರ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಪತ್ನಿಯ ಕಾಟಕ್ಕೆ ಬೇಸತ್ತು ಟೆಕ್ಕಿ ಅತುಲ್ ಸುಭಾಷ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಇನ್ನೂ ತನಿಖಾ ಹಂತದಲ್ಲಿರುವಾಗಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಬೆಂಗಳೂರಿನಲ್ಲಿ ಹೆಂಡತಿ ಹಾಗೂ ಮಾವನ ಕಾಟಕ್ಕೆ ಬೇಸತ್ತು ಹೆಡ್ ಕಾನ್ಸ್ಟೇಬಲ್ ಒಬ್ಬರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ರೈಲಿಗೆ ತಲೆಕೊಟ್ಟು ತಿಪ್ಪಣ್ಣ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಳಿಮಾವು ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ತಿಪ್ಪಣ್ಣ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಹಾಗೂ ಮಾವನ ಕಿರುಕುಳದ ಬಗ್ಗೆ ಡೆತ್ ನೋಟ್ನಲ್ಲಿ ಬರೆದಿಟ್ಟು ಸಾವನ್ನಪ್ಪಿದ್ದಾರೆ. ಮೂರು ವರ್ಷಗಳ ಹಿಂದೆ ತಿಪ್ಪಣ್ಣ ಅವರು ವಿವಾಹವಾಗಿದ್ದರು. ಒಂದು ವರ್ಷದ ವರೆಗೆ ಸುಖ ದಾಂಪತ್ಯ ನಡೆಸಿದ್ದರು. ಆದರೆ ಒಂದು ವರ್ಷದ ಬಳಿಕ ಸಂಸಾರದಲ್ಲಿ ಬಿರುಕು, ಕಲಹ ಉಂಟಾಗಿದೆ. ಅಲ್ಲದೆ ಹೆಣ್ಣು ಕೊಟ್ಟ ಮಾವ ಯಮುನಪ್ಪ ಎನ್ನುವವರು ಕೂಡ ಮಾನಸಿಕವಾಗಿ ಹಿಂಸೆ ನೀಡಿದ್ದು ಅಶ್ಲೀಲವಾಗಿ ಬೈದು ಹಿಂಸೆ ನೀಡಿದ್ದಾರೆ. ಮಾವ ಯಮನಪ್ಪ ಜೀವ ಬೆದರಿಕೆ ಹಾಕಿರುವ ಬಗ್ಗೆ ಡೆತ್ ನೋಟ್ ಅಲ್ಲಿ ತಿಪ್ಪಣ್ಣ ಉಲ್ಲೇಖಿಸಿದ್ದಾರೆ. ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೈಲ್ವೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.