ನೈಸರ್ಗಿಕದತ್ತವಾದ ಆಹಾರ ಸೇವನೆ ಮಾಡಿದರೆ, ಆರೋಗ್ಯವೂ ಚೆನ್ನಾಗಿರುವುದು ಮತ್ತು ಅನಾರೋಗ್ಯದ ಅಪಾಯಗಳು ಕಡಿಮೆ ಮಾಡಿಕೊಳ್ಳಬಹುದು. ಕೆಲವು ಆಹಾರಗಳು ಹೃದಯ ಸ್ನೇಹಿಯಾಗಿದ್ದು, ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇಂದಿನ ದಿನಗಳಲ್ಲಿ ಹೃದಯದ ಆರೋಗ್ಯಕ್ಕೆ ಹೆಚ್ಚು ಗಮನಹರಿಸಬೇಕಾಗುತ್ತದೆ.
ಯಾಕೆಂದರೆ ವಿಶ್ವದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವೃದ್ಧಿಯಾಗುತ್ತಿದ್ದು, ಹೃದಯದ ಸಮಸ್ಯೆಯಿಂದ ಪ್ರತೀ 33 ಸೆಕೆಂಡಿಗೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ ಎಂದು ಅಮೆರಿಕಾದ ಸಿಡಿಸಿ ಹೇಳಿದೆ. ಆದರೆ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು. ಹೃದಯ ಸ್ನೇಹಿಯಾಗಿರುವ 8 ಆಹಾರಗಳು ಇಲ್ಲಿದ್ದು, ಅವುಗಳ ಬಗ್ಗೆ ತಿಳಿಯಿರಿ..
ಮೀನು:
ಮುಖ್ಯವಾಗಿ ಕೊಬ್ಬಿನಾಮ್ಲವು ಇರುವಂತಹ ರೊಹುನಂತಹ ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಉತ್ತಮ ಪ್ರಮಾಣದಲ್ಲಿದೆ. ಈ ಕೊಬ್ಬಿನಾಮ್ಲವು ಉರಿಯೂತ ಕಡಿಮೆ ಮಾಡಿ, ರಕ್ತದೊತ್ತಡ ತಗ್ಗಿಸುವುದು ಮತ್ತು ಟ್ರೈಗ್ಲಿಸರೈಡ್ನ್ನು ಕಡಿಮೆ ಮಾಡುವುದು.
ವಾರದಲ್ಲಿ ಎರಡು ಸಲ ಮೀನು ಸೇವನೆ ಮಾಡಿದರೆ, ಆಗ ಇದರಿಂದ ಶೇ.30 ರಷ್ಟು ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡಬಹುದು ಎಂದು ಅಮೆರಿಕಾದ ಅಧ್ಯಯನಗಳು ಹೇಳಿವೆ.
ಓಟ್ಸ್:
ಇದರಲ್ಲಿ ಹೀರಿಕೊಳ್ಳುವ ನಾರಿನಾಂಶವಿದ್ದು, ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು. ಓಟ್ಸ್ ಸೇವನೆ ಮಾಡಿದರೆ, ಆಗ ಇದರಿಂದ ಸಂಪೂರ್ಣ ಕೊಲೆಸ್ಟ್ರಾಲ್ ಮಟ್ಟವನ್ನು ಶೇ. 5-10 ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತಿಳಿಸಿವೆ.
ವಾಲ್ನಟ್:
ವಾಲ್ನಟ್ ನಲ್ಲಿ ನೈಸರ್ಗಿಕದತ್ತವಾಗಿರುವ ಆರೋಗ್ಯಕಾರಿ ಕೊಬ್ಬು, ನಾರಿನಾಂಶ ಮತ್ತು ಪ್ರೋಟೀನ್ ಇದೆ. ಇದರಲ್ಲಿ ಸಸ್ಯಜನ್ಯವಾಗಿರುವ ಒಮೆಗಾ-3 ಕೊಬ್ಬಿನಾಮ್ಲವಿದ್ದು, ಇದು ಹೃದಯದ ಕಾಯಿಲೆ ಅಪಾಯ ತಗ್ಗಿಸುವುದು.
ಡಾರ್ಕ್ ಚಾಕಲೇಟ್:
ಡಾರ್ಕ್ ಚಾಕಲೇಟ್ ನಲ್ಲಿ ಫ್ಲಾವನಾಯ್ಡ್ ಸಮೃದ್ಧವಾಗಿದ್ದು, ಇದು ರಕ್ತದೊತ್ತಡ ತಗ್ಗಿಸಿ, ರಕ್ತ ಸಂಚಾರ ಸುಧಾರಣೆ ಮಾಡುವ ಜತೆಗೆ ಉರಿಯೂತ ಕಡಿಮೆ ಮಾಡುವುದು. ಶೇ.70ರಷ್ಟು ಕೋಕಾ ಇರುವ ಡಾರ್ಕ್ ಚಾಕಲೇಟ್ ಸೇವನೆ ಮಾಡಿ. ಇದರಿಂದ ಹೃದಯದ ಕಾಯಿಲೆ ಅಪಾಯವು ಕಡಿಮೆ ಆಗುವುದು.
ಬಾದಾಮಿ:
ಬಾದಾಮಿಯು ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು ಮತ್ತು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವುದು. ನಿತ್ಯವೂ ಬಾದಾಮಿ ಸೇವನೆ ಮಾಡಿದರೆ, ಆಗ ಇದರಿಂದ ಲಿಪಿಡ್ ಪ್ರೊಫೈಲ್ ಉತ್ತಮವಾಗಿ, ರಕ್ತನಾಳಗಳ ಆರೋಗ್ಯ ಸುಧಾರಣೆ ಆಗುವ ಜತೆಗೆ ಹೃದಯದ ಕಾಯಿಲೆ ಅಪಾಯವನ್ನು ಕಡಿಮೆ ಮಾಡುವುದು.
ಚಿಯಾ ಬೀಜ:
ಚಿಯಾ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲ, ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಚಿಯಾ ಬೀಜಗಳನ್ನು ಸೇವನೆ ಮಾಡಿದರೆ ಆಗ ಇದು ರಕ್ತದೊತ್ತಡ ತಗ್ಗಿಸುವುದು, ಕೊಲೆಸ್ಟ್ರಾಲ್ ಮತ್ತು ಉರಿಯೂತ ಕಡಿಮೆ ಮಾಡುವುದು. ಇದೆಲ್ಲದರ ಪರಿಣಾಮವಾಗಿ ಹೃದಯದ ಆರೋಗ್ಯವು ಉತ್ತಮವಾಗಿರುವುದು.
ಬೆಳ್ಳುಳ್ಳಿ:
ಬೆಳ್ಳುಳ್ಳಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡುತ್ತೇವೆ. ಇದರಲ್ಲಿ ಇರುವ ಅಲಿಸಿನ್ ಎನ್ನುವ ಅಂಶವು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವುದು.
ಇದನ್ನು ಸೇವನೆ ಮಾಡಿದರೆ ಆಗ ರಕ್ತನಾಳದ ಆರೋಗ್ಯ ವೃದ್ಧಿಸಿ, ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಿ ಹೃದಯ ರಕ್ತನಾಳದ ಕಾಯಿಲೆ ಅಪಾಯ ಕಡಿಮೆ ಮಾಡುವುದು. ಆಕ್ಸಿಡೇಟಿವ್ ಒತ್ತಡದಿಂದ ದೇಹದ ಆರೋಗ್ಯಕಾರಿ ಅಂಗಾಂಶಗಳಿಗೆ ಹಾನಿಯಾಗುವುದು.
ಅಗಸೆಬೀಜ:
ಅಗಸೆಬೀಜವು ರಕ್ತದೊತ್ತಡ ಕಡಿಮೆ ಮಾಡುವ ಜತೆಗೆ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿ ಇಡುವುದು. ಅದೇ ರೀತಿಯಲ್ಲಿ ಇದು ಹೃದಯದ ಕಾಯಿಲೆ ಅಪಾಯ ಕಡಿಮೆ ಮಾಡುವುದು. ಅಗಸೆ ಬೀಜವನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿಕೊಂಡರೆ ಆಗ ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.