ಕರ್ನಾಟಕದಲ್ಲಿ ಭರ್ಜರಿ ಮುಂಗಾರು ಮಳೆ ಬೀಳುತ್ತಿರುವ ಕಾರಣಕ್ಕೆ ಈಗ ಜಲಾಶಯಗಳ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಕಳೆದ 2 ವಾರಗಳಿಂದ ನಿರಂತರವಾಗಿ ಮಳೆ ಬಿದ್ದ ಕಾರಣ ಈಗ ಕರ್ನಾಟಕದ ಡ್ಯಾಂಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಏರಿಕೆ ಆಗುತ್ತಿದೆ.
ಕೆಆರ್ಎಸ್ ಜಲಾಶಯ
ಕೆಆರ್ಎಸ್ ಜಲಾಶಯದಲ್ಲಿ ಒಟ್ಟು 49.45 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇದ್ದು, ಸದ್ಯ 25.59 ಅಡಿ ನೀರು ಇದೆ. 6,600 ಕ್ಯುಸೆಕ್ ನೀರು ಕೆಆರ್ಎಸ್ ಡ್ಯಾಂಗೆ ಹರಿದು ಬರ್ತಿದೆ. ಅಲ್ಲದೆ ಕಾವೇರಿ ಕೊಳ್ಳದಲ್ಲಿ ಮತ್ತಷ್ಟು ಉತ್ತಮ ಮಳೆಯ ನಿರೀಕ್ಷೆ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ.
ಕಬಿನಿ ಜಲಾಶಯ
ಕಬಿನಿ ಜಲಾಶಯದಲ್ಲಿ 19.52 ಟಿಎಂಸಿ ಅಡಿ ನೀರನ್ನು ಸಂಗ್ರಹ ಮಾಡಬಹುದು. ಕಬಿನಿ ಡ್ಯಾಂನಲ್ಲಿ ಇದೀಗ 18.52 ಟಿಎಂಸಿ ಅಡಿ ನೀರು ಸಂಗ್ರಹ ಇದೆ. 6,148 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಹೇಮಾವತಿ ಡ್ಯಾಂ
ಹಾಸನ ಜಿಲ್ಲೆಯ ಹೇಮಾವತಿ ಡ್ಯಾಂ ಒಟ್ಟು 37 ಟಿಎಂಸಿ ಸಾಮರ್ಥ್ಯ ಹೊಂದಿದೆ. ಈಗ ಡ್ಯಾಂಗೆ ಬರೋಬ್ಬರಿ 6,767 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗೆ ಹೇಮಾವತಿ ಜಲಾಶಯದಲ್ಲಿ 19 ಟಿಎಂಸಿ ನೀರು ಸಂಗ್ರಹ ಆಗಿದೆ 2899 ಅಡಿ ನೀರು ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಆಲಮಟ್ಟಿ ಜಲಾಶಯ
ಆಲಮಟ್ಟಿ ಜಲಾಶಯದಲ್ಲಿ 71.39 ಟಿಎಂಸಿ ನೀರು ಸಂಗ್ರಹ ಆಗಿದೆ. ಒಟ್ಟು 123.08 ಟಿಎಂಸಿ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯಕ್ಕೆ ಭರ್ಜರಿ ನೀರು ಹರಿದು ಬರುತ್ತಿದೆ.
ತುಂಗಾಭದ್ರಾ ಜಲಾಶಯ
ತುಂಗಾಭದ್ರಾ ಜಲಾಶಯದಲ್ಲಿ ಈಗ 7,356 ಕ್ಯುಸೆಕ್ ಒಳ ಹರಿವು ಇದ್ದು, ಒಟ್ಟಾರೆ 71.5 ಟಿಎಂಸಿ ಇರುವ ಜಲಾಶಯದಲ್ಲಿ ಈಗ 24 ಟಿಎಂಸಿ ನೀರು ಸಂಗ್ರಹ ಆಗಿದೆ.
ಲಿಂಗನಮಕ್ಕಿ ಜಲಾಶಯ
ಶಿವಮೊಗ್ಗ ಜಿಲ್ಲೆ ಲಿಂಗನಮಕ್ಕಿ ಜಲಾಶಯಕ್ಕೆ ಈಗ 13,659 ಕ್ಯುಸೆಕ್ ನೀರು ಬರುತ್ತಿದ್ದು, 2881.05 ಕ್ಯುಸೆಕ್ ಹೊರಗೆ ಬಿಡಲಾಗುತ್ತಿದೆ. ಒಟ್ಟು 1819 ಅಡಿ ಎತ್ತರದ ಲಿಂಗನಮಕ್ಕಿ ಡ್ಯಾಂನಲ್ಲಿ ಈಗ 1771.45 ಅಡಿ ನೀರು ಇದೆ. ಈ ಮೂಲಕ 151.64 ಟಿಎಂಸಿ ಸಾಮರ್ಥ್ಯದ ಲಿಂಗನಮಕ್ಕಿ ಡ್ಯಾಂ ಇದೀಗ 41.60 ಟಿಎಂಸಿ ನೀರನ್ನು ಸಂಗ್ರಹ ಮಾಡಿಕೊಂಡಿದೆ. ಇನ್ನು ತುಂಗಾ ಜಲಾಶಯ ಪೂರ್ತಿ ತುಂಬಿ ಹೋಗಿದ್ದು, ಒಟ್ಟು 11,619 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.