ಬೆಂಗಳೂರು: ಚೀನಾದಲ್ಲಿ ಕಂಡು ಬಂದ ಎಚ್ಎಂಪಿವಿ ಮಾದರಿ ಸೋಂಕು ಬೆಂಗಳೂರಿನಲ್ಲೂ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತುರ್ತು ಸಭೆಯನ್ನು ಕರೆದಿದ್ದಾರೆ. ಸೋಮವಾರ ಆರೋಗ್ಯ ಅಧಿಕಾರಿಗಳ ಜೊತೆ ಸಚಿವರು ಸಭೆ ನಡೆಸಲಿದ್ದಾರೆ.
ಚೀನಾದಲ್ಲಿ ಎಚ್ಎಂಪಿವಿ ವೈರಸ್ ಹೆಚ್ಚಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಆದರೆ ಇದೇ ಮಾದರಿಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಲಕ್ಷಣಗಳು ಕಂಡುಬಂದಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತಂತೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಆರೋಗ್ಯ ಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ.
ಎನಿದು HMPV ವೈರಸ್?
ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಎಂಬುವುದು ಇದರ ಪೂರ್ಣ ಹೆಸರಾಗಿದೆ. ಈ ಸೋಂಕು ಹೊಸತಾಗಿ ಏನು ಕಂಡು ಬಂದಿದ್ದಲ್ಲ. 2001 ರಲ್ಲಿ ಈ ಸೋಂಕು ಪತ್ತೆಯಾಗಿತ್ತು. ಎಚ್ ಎಂ ಪಿ ವಿ ಸೋಂಕು ಕೋವಿಡ್ 19 ಮಾದರಿಯಲ್ಲಿ ಹರಡುತ್ತದೆ. ಇದು ಎಲ್ಲಾ ವಯಸ್ಸಿನ ಜನರಲ್ಲೂ ಹರಡುವ ಸಾಧ್ಯತೆ ಇದೆ. ಈ ಸೋಂಕು ಪತ್ತೆಯಾದವರಲ್ಲಿ ಉಸಿರಾಟದ ಸಮಸ್ಯೆ ಕಂಡು ಬರುತ್ತದೆ.
ಚೀನಾದಲ್ಲಿ ಈ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಸಾಮಾನ್ಯ ಶೀತ ಹಾಗೂ ಸಣ್ಣ ವಯಸ್ಸಿನ ಮಕ್ಕಳಲ್ಲಿ ಜ್ವರದ ಲಕ್ಷಣಗಳ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಸದ್ಯ ಈ ಬೆಳವಣಿಗೆಗಳ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದೆ. ಅಲ್ಲದೆ, ಅಂತರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ.
ಆತಂಕ ಪಡುವ ಅಗತ್ಯ ಇಲ್ಲ
ಸದ್ಯ ಈ ಸೋಂಕು ಬೆಂಗಳೂರಿನಲ್ಲಿ ಮಗುವೊಂದರಲ್ಲಿ ಪತ್ತೆಯಾಗಿದ್ದು, ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಹೀಗಿದ್ದರೂ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಸದ್ಯದ ಬೆಳವಣಿಗೆಗಳ ಬಗ್ಗೆ ಪೂರ್ಣ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಆರೋಗ್ಯ ಸಚಿವರು ತುರ್ತು ಸಭೆಯನ್ನು ಕರೆದು ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಸದ್ಯದ ಬೆಳವಣಿಗೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.