- ಧಾರವಾಡ ಮಹಾನಗರ ಪಾಲಿಕೆಗೆ ಮೇಯರ್ ಆಗಿ ರಾಮಪ್ಪ ಬಡಿಗೇರ ಆಯ್ಕೆ
- ಉಪಮೇಯರ್ ಆಗಿ ದುರ್ಗಮ್ಮ ಬಿಜವಾಡ ಆಯ್ಕೆ
ಧಾರವಾಡ ಮಹಾನಗರ ಪಾಲಿಕೆಗೆ ಮೇಯರ್ ಆಗಿ ರಾಮಪ್ಪ ಬಡಿಗೇರ ಆಯ್ಕೆಯಾಗಿದ್ದು, ಇನ್ನು ಉಪಮೇಯರ್ ಆಗಿ ದುರ್ಗಮ್ಮ ಬಿಜವಾಡ ಆಯ್ಕೆಯಾಗಿದ್ದಾರೆ. ಮಹಾನಗರ ಪಾಲಿಕೆಗೆ ಮೇಯರ್ ಆಗಿ ಆಯ್ಕೆಯಾಗಿರುವುದು ಸಾಕಷ್ಟು ಖುಷಿ ತಂದಿದೆ. 23 ನೇ ಅವಧಿಗೆ ನನ್ನನ್ನು ಮೇಯರ್ ಆಗಿ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆಗಳು ಎಂದು ನೂತನ ಮೇಯರ್ ರಾಮಪ್ಪ ಬಡಿಗೇರ ಹೇಳಿದರು.
ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ಅವಳಿ ನಗರದಲ್ಲಿ ಸಾಕಷ್ಟು ಸವಾಲುಗಳಿವೆ. ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ ಆ ಸಮಸ್ಯೆಗಳನ್ನ ಹಂತಹಂತವಾಗಿ ಬಗೆಹರಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆಯನ್ನ ಪರಿಹರಿಸಲಾಗುವುದು. ಪಾಲಿಕೆಗೆ ಬರಬೇಕಿರುವ ಅನುದಾನ ಹಾಗೂ ತೆರಿಗೆ ಬಾಕಿ ವಿಚಾರದಲ್ಲಿ ಸೂಕ್ತ ಕ್ರಮಕೈಗೊಳ್ಳಾಗುವುದು. ಅವಳಿನಗರದ ಸಮಗ್ರ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿದ್ದೇವೆ ಎಂದು ನೂತನ ಮೇಯರ್ ಭರವಸೆ ನೀಡಿದರು.
ಈ ಹಿಂದಿನ ಇಬ್ಬರು ಮೇಯರ್ ಗಳು ಮೇಯರ್ ಗೌನ್ ಧರಿಸಿರಲಿಲ್ಲ ತಾವು ಧರಿಸಿದ್ದರ ಗುಟ್ಟೇನು ಎಂಬ ಮಾಧ್ಯಮದವರ ಪ್ರಶ್ನೆ ಉತ್ತರಿಸಿದ ಅವರು, ಗೌನ್ ನಿಂದ ಮೇಯರ್ ಕುರ್ಚಿಗೆ ಗೌರವವಿದೆ. ಇದಕ್ಕಾಗಿ ನಾನು ಧರಿಸಿದ್ದೇನೆ. ಹಿಂದಿನವರು ಯಾಕೆ ಧರಿಸಿರಲಿಲ್ಲ ಎಂಬುದು ಅವರ ವೈಯಕ್ತಿಕ ವಿಚಾರ ಅದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡುವದಿಲ್ಲ ಎಂದರು. ಇನ್ನೂ ಇದೇ ವೇಳೆ ಉಪಮೇಯರ್ ದುರ್ಗಮ್ಮ ಬಿಜವಾಡ ಮಾತನಾಡಿ, ನಾನು ನಗರದ ಅಭಿವೃದ್ದಿಗೆ ಶ್ರಮಿಸುತ್ತೇನೆ. ಮೇಯರ್ ಹಾಗೂ ಉಪಮೇಯರ್ ಎನ್ನದೆ ಒಗ್ಗಟ್ಟಿನಿಂದ ಕೆಲಸ ಮಾಡುವದಾಗಿ ತಿಳಿಸಿದರು.