ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ಮಠಾಧೀಶರ ನೇತೃತ್ವದಲ್ಲಿ ವಿವಿಧ ಸಂಘಟನೆ ಪದಾಧಿಕಾರಿಗಳು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಮಾತನಾಡಿ, ಬಿಜೆಪಿ ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನೀಚತನದ ಪರಮಾವಧಿ. ಮಾನವೀಯತೆ ತಲೆ ತಗ್ಗಿಸುವಂಥಹ ಕೆಲಸ. ರಾಜಕಾರಣಿಗಳು ನೇಹಾ ಕೊಲೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂದು ತನಿಖೆಯಾಗಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ಯಾವುದೇ ಸರ್ಕಾರ ಇಂಥ ಪ್ರಕರಣಗಳನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಜವಾಬ್ದಾರಿಯಿಂದ ವರ್ತಿಸಬೇಕು. ರಾಜ್ಯ, ಕೇಂದ್ರ ಸರ್ಕಾರಗಳು ಏನು ಮಾಡ್ತಿವೆ ಎಂದು ಚಿಂತಿಸಬೇಕು. ಒಂದು ಪಕ್ಷ ಲವ್ ಜಿಹಾದ್ ಎಂದರೆ, ಮತ್ತೊಂದು ಪಕ್ಷ ವೈಯಕ್ತಿಕ ಎನ್ನುತ್ತಿದೆ . ನೀವು ನೈತಿಕವಾಗಿ ನಿಮ್ಮ ನಿಮ್ಮ ಸ್ಥಾನದಲ್ಲಿ ಇರಲು ಯೋಗ್ಯರೇ ಎಂದು ಸ್ವಾಮೀಜಿ ಪ್ರಶ್ನಿಸಿದರು.