ತುಂಗಭದ್ರಾ ಜಲಾಶಯ ಮತ್ತು ಕೆಆರ್ಎಸ್ ಡ್ಯಾಂನಿಂದ ಸುಮಾರು 1.50 ಲಕ್ಷ ಕ್ಯುಸೆಕ್ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಮತ್ತು ಕಾವೇರಿ ನದಿಗಳಲ್ಲಿ ಪ್ರವಾಹದ ಸ್ಥಿತಿ ಮುಂದುವರಿದಿದೆ. ತುಂಗಭದ್ರಾ ನದಿ ನೀರಿನಮಟ್ಟ ಏರಿಕೆಯಾಗಿ ಸತತ 2ನೇ ದಿನವೂ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನದ ಸ್ನಾನಘಟ್ಟ, ಶಿವಪುರ ಗ್ರಾಮದ ಮಾರ್ಕಂಡೇಶ್ವರ ದೇವಸ್ಥಾನ, ರಾಯಚೂರಿನಲ್ಲಿರುವ ರಾಘವೇಂದ್ರ ಸ್ವಾಮಿಗಳ ಜಪದಕಟ್ಟೆ ಜಲಾವೃತವಾಗಿದೆ. ಅದೇ ರೀತಿ ಹಂಪಿಯ ನದಿಪಾತ್ರದ ಬಹುತೇಕ ಸ್ಮಾರಕಗಳೂ ಮುಳುಗಡೆಯಾಗಿವೆ. ಇನ್ನು ರಾಯರು ತಪಸ್ಸು ಮಾಡಿದ ಮಂತ್ರಾಲಯದ ಎಲೆಬಿಚ್ಚಾಲಿ ಜಪದ ಕಟ್ಟೆ ಸುತ್ತಲೂ ನೀರು ಆವರಿಸಿದೆ. ಕಾವೇರಿ ನದಿತಟದಲ್ಲೂ ಪ್ರವಾಹ ಸ್ಥಿತಿ ಇದ್ದು, ಶ್ರೀರಂಗಪಟ್ಟಣದ ರಾಮಕೃಷ್ಣ ವಿವೇಕಾನಂದ ಆಶ್ರಮವೂ ಜಲಾವೃತವಾಗಿದ್ದು, ಆಶ್ರಮದ ಸ್ವಾಮೀಜಿ ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ.