ಹೈದರಾಬಾದ್ ಮೂಲದ ಹಿರಿಯ ಭಾರತೀಯ ಕಂದಾಯ ಸೇವೆ ಅಧಿಕಾರಿಯೊಬ್ಬರು ತಮ್ಮ ಹೆಸರು ಮತ್ತು ಲಿಂಗವನ್ನು ಬದಲಾಯಿಸುವಂತೆ ಮಾಡಿದ ಮನವಿಯನ್ನು ಕೇಂದ್ರ ಹಣಕಾಸು ಸಚಿವಾಲಯ ಅನುಮೋದಿಸಿದೆ. ಭಾರತೀಯ ನಾಗರಿಕ ಸೇವೆಯ ಇತಿಹಾಸದಲ್ಲಿ ಇಂತಹ ಬದಲಾವಣೆಯ ಮೊದಲ ನಿದರ್ಶನ ಇದಾಗಿದೆ.
ಪ್ರಸ್ತುತ ಹೈದರಾಬಾದ ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮುಖ್ಯ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ನೇಮಕಗೊಂಡಿರುವ ಎಂ.ಅನುಸೂಯಾ ಅವರು ತಮ್ಮ ಹೆಸರನ್ನು ಎಂ. ಅನುಕರ್ತಿ ಸೂರ್ಯ ಎಂದು ಬದಲಾಯಿಸಲು ಮತ್ತು ಲಿಂಗವನ್ನು ಮಹಿಳೆಯಿಂದ ಪುರುಷನಿಗೆ ಬದಲಾಯಿಸಲು ಕೋರಿದ್ದರು. ಅಧಿಕಾರಿಯ ಮನವಿಯನ್ನು ಪರಿಗಣಿಸಿ ಅನುಮೋದಿಸಲಾಗಿದೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಎಂ.ಅನುಸೂಯಾ ಅವರ ಮನವಿಯನ್ನು ಪರಿಗಣಿಸಲಾಗಿದೆ. ಇನ್ನು ಮುಂದೆ, ಈ ಅಧಿಕಾರಿಯನ್ನು ಎಲ್ಲಾ ಅಧಿಕೃತ ದಾಖಲೆಗಳಲ್ಲಿ ‘ಶ್ರೀ ಎಂ ಅನುಕರ್ತಿ ಸೂರ್ಯ’ ಎಂದು ಗುರುತಿಸಲಾಗುವುದು ಎಂದು ಕಂದಾಯ ಇಲಾಖೆಯ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ ಆದೇಶದಲ್ಲಿ ತಿಳಿಸಲಾಗಿದೆ.