ಭಾರತೀಯ ರೈಲ್ವೇ ಈಗಾಗಲೇ ಹೊಸ ಹೊಸ ರೈಲು, ವಂದೇ ಭಾರತ್ ರೈಲು, ಹೊಸ ಕೋಚ್, ಹೊಸ ಮಾರ್ಗ ಸೇರಿದಂತೆ ರೈಲ್ವೇಯನ್ನು ಅತ್ಯಾಧುನಿಕ ಹಾಗೂ ಮೇಲ್ದರ್ದೆಗೆ ಏರಿಸುತ್ತಿದೆ. ಇದೀಗ ರೈಲ್ವೇ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲವು ವರ್ಷಗಳಿಂದ ಹಲವು ರೀತಿಯ ಬದಲಾವಣೆಗಳು ಆಗುತ್ತಿವೆ. ರೈಲಿನಲ್ಲಿ ಮೂಲಭೂತ ಸೌಕರ್ಯಗಳಿಂದ ಹಿಡಿದು ಹೊಸ ಮಾದರಿಯ ರೈಲುಗಳು ಲಾಂಚ್ ಆಗುತ್ತಿವೆ. ಈಗ ರೈಲು ಪ್ರಯಾಣಿಕರಿಗೆ ಮತ್ತೊಂದು ಖುಷಿಯ ಸುದ್ದಿ ನೀಡಿದೆ ಭಾರತೀಯ ರೈಲ್ವೆ ಇಲಾಖೆ. ಸದ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಭಾರತದ ರೈಲು ಹಳಿಗಳ ಮೇಲೆ ಹೈಡ್ರೋಜನ್ ರೈಲು ಓಡಲಿದೆ.
ಬರುವ ಡಿಸೆಂಬರ್ನಲ್ಲಿ ಈ ಒಂದು ರೈಲನ್ನು ಭಾರತೀಯ ರೈಲ್ವೆ ಇದನ್ನು ಲಾಂಚ್ ಮಾಡಲಿದೆ. ಈ ರೈಲು ಓಡಲು ಯಾವುದೇ ರೀತಿಯ ಡಿಸೇಲ್ ಆಗಲಿ ವಿದ್ಯುತ್ ಶಕ್ತಿ ಆಗಲಿ ಬೇಕಿಲ್ಲ. ಇದು ಹೊರಸೂಸುವ ಕಾರ್ಬನ್ನ ಪ್ರಮಾಣ ಸೊನ್ನೆ ಎಂದು ಹೇಳಲಾಗಿದೆ. ಆರಂಭದಲ್ಲಿ ನೀರಿನಿಂದಲೇ ಈ ರೈಲು ತನ್ನ ಓಡುವ ಶಕ್ತಿಯನ್ನ ಉತ್ಪಾದಿಸಿಕೊಳ್ಳುವ ಈ ರೈಲು ಬಳಿಕ ಹೈಡ್ರೋಜನ್ ಶೆಲ್ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಿಕೊಂಡು ಓಡುತ್ತದೆ ಎಂದು ಕೂಡ ಹೇಳಲಾಗಿದೆ. 2030ರ ವೇಳೆಗೆ ಇಡೀ ರೈಲ್ವೆ ಇಲಾಖೆ ಜಿರೋ ಕಾರ್ಬನ್ ಎಮಿಟರ್ ಆಗಿ ಹೊರಹೊಮ್ಮುವ ಗುರಿಯನ್ನು ಇಟ್ಟುಕೊಂಡಿದೆ.
ಪ್ರಮುಖವಾಗಿ ಈ ಒಂದು ರೈಲನ್ನು ಪರಿಚಯಸಲು ಕಾರಣ ವಾಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ. ಡಿಸೇಲ್ ಇಂಜಿನ್ಗಳ ರೈಲಿನಿಂದ ತೀವ್ರ ವಾಯುಮಾಲಿನ್ಯವಾಗುತ್ತದೆ. ಆದ್ರೆ ಹೈಡ್ರೊಜನ್ ಸೆಲ್ಗಳಿಂದ ಓಡುವ ಈ ರೈಲು ಯಾವುದೇ ರೀತಿಯ ಕಾರ್ಬನ್ ಡೈಯಾಕ್ಸೈಡ್ ಹಾಗೂ ನೆಟ್ರೋಜನ್ ಆಕ್ಸಿಡ್ಸ್ಗಳನ್ನ ಹೊರಸೂಸುವುದಿಲ್ಲ. ಹೀಗಾಗಿ ಭವಿಷ್ಯದಲ್ಲಿ ಇದು ಪರಿಸರ ಸ್ನೇಹಿ ರೈಲ್ವೆಯಾಗಿ ದೇಶಾದ್ಯಂತ ಗುರುತಿಸಿಕೊಳ್ಳಲಿದೆ.
ಭಾರತದ ಮೊದಲ ಹೈಡ್ರೊಜನ್ ರೈಲು ಈಗಾಗಲೇ ಹರಿಯಾಣದ ಜಿಂದ್-ಸೋನಿಪತ್ ನಡುವಿನ 90 ಕಿಲೋ ಮೀಟರ್ ಟ್ರಯಲ್ ರನ್ ನಡಿಸಿ, ಯಶಸ್ವಿಯಾಗಿ ನಾನು ಹಳಿಗಳ ಮೇಲೆ ಓಡಬಲ್ಲೆ ಎಂಬುದನ್ನು ನಿರೂಪಿಸಿದೆ. ಪ್ರಮುಖವಾಗಿ ಬೆಟ್ಟ ಗುಡ್ಡದ ಪ್ರದೇಶಗಳಲ್ಲಿ ಈ ರೈಲು ಓಡಿಸುವ ಉದ್ದೇಶವನ್ನು ರೈಲ್ವೆ ಇಲಾಖೆ ಹೊಂದಿದೆ. ಹಿಮಾಚಲ ಪ್ರದೇಶ, ನೀಲಗಿರಿ ಮೌಂಟೇನ್ ರೈಲ್ವೆ, ಕಲ್ಕಾ- ಶಿಮ್ಲಾ ರೈಲ್ವೆ ಇಂತಹ ಪ್ರದೇಶಗಳಲ್ಲಿ ಓಡಿಸಲು ಚಿಂತನೆ ನಡೆದಿದೆ.
ಮುಂದಿನ ವರ್ಷದೊಳಗೆ, ಅಂದ್ರೆ 2025ರೊಳಗೆ ದೇಶದಲ್ಲಿ ಒಟ್ಟು 35 ಹೈಡ್ರೋಜನ್ ರೈಲುಗಳನ್ನು ಓಡಿಸುವ ಗುರಿಯನ್ನು ಹೊಂದಿದೆ ರೈಲ್ವೆ ಇಲಾಖೆ. ಈ ರೈಲಿನ ವೇಗ ಗಂಟೆಗೆ 140 ಕಿಲೋ ಮೀಟರ್ ಎಂದು ಹೇಳಲಾಗುತ್ತಿದೆ. ಈ ಒಂದು ರೈಲು ಸವಾರಿ ಅತ್ಯಂತ ಆರಾಮದಾಯ. ಸಮರ್ಪಕ ಹಾಗೂ ಪರಿಸರ ಸ್ನೇಹಿ ಅನುಭವವನ್ನು ಪ್ರಯಾಣಿಕರಿಗೆ ನೀಡಲಿದೆ ಎಂದು ಹೇಳಲಾಗುತ್ತಿದೆ.