ಸಾಮಾಜಿಕ ಜಾಲತಾಣಗಳಲ್ಲಿ ಕುಖ್ಯಾತ ರೌಡಿಗಳ ಪರ ಫ್ಯಾನ್ ಪೇಜ್ ತೆರೆದು ರೀಲ್ಸ್ ಮಾಡಿ ಬಿಲ್ಡಪ್ ನೀಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಬಿಸಿಮುಟ್ಟಿಸಿರುವ ಪೊಲೀಸರು, ಇನ್ನು ಮುಂದೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಂ, ಯುಟ್ಯೂಬ್, ಫೇಸ್ಬುಕ್ಗಳಲ್ಲಿ ರೌಡಿಗಳ ಪರ ಫ್ಯಾನ್ ಪೇಜ್ ತೆರೆದು ರೀಲ್ ಮಾಡಿ ಸಿನಿಮಾ ಹೀರೋಗಳ ಮಾದರಿಯಲ್ಲಿ ಬಿಲ್ಡಪ್ ನೀಡುತ್ತಿದ್ದ ಸುಮಾರು 60ಕ್ಕೂ ಅಧಿಕ ಖಾತೆಗಳನ್ನು ಪತ್ತೆಹಚ್ಚಿದ್ದಾರೆ. ಈ ಫ್ಯಾನ್ ಪೇಜ್ ತೆರೆದ ಅಡ್ಮಿನ್ಗಳನ್ನು ಸಿಸಿಬಿ ಕಚೇರಿಗೆ ಕರೆಸಿ ಬಿಸಿ ಮುಟ್ಟಿಸಿದ್ದಾರೆ. 500 ಕ್ಕೂ ಅಧಿಕ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ರೌಡಿಗಳ ಪರ ಫ್ಯಾನ್ ಪೇಜ್ ತೆರೆದ ಆಡ್ಮಿನ್ಗಳ ಪೈಕಿ ಬಹುತೇಕರು ಅಪ್ರಾಪ್ತ ಬಾಲಕರು ಎಂಬುದು ಗೊತ್ತಾಗಿದೆ. ಹೀಗಾಗಿ ಅವರ ಪೋಷಕರನ್ನು ಸಹ ಸಿಸಿಬಿ ಕಚೇರಿಗೆ ಕರೆಸಿ ಸೂಕ್ತ ತಿಳಿವಳಿಕೆ ನೀಡಿದ್ದಾರೆ. ಇನ್ನು ಮುಂದೆ ಇಂತಹ ಕೆಲಸ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಯುವಕರ ಖರ್ಚಿಗೆ ಹಣಕೊಟ್ಟು ಬಿಲ್ಡಪ್: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ವಾಗಿರುವ ಯುವಕರನ್ನು ಸಂಪರ್ಕಿಸಿರುವ ಕುಖ್ಯಾತ ರೌಡಿಗಳ ಶಿಷ್ಯರು ತಮ್ಮ ಬಾಸ್ಗಳ ಪರ ಫ್ಯಾನ್ ಪೇಜ್ ತೆರೆದು ರೀಲ್ ಮಾಡು ವಂತೆ ಪುಸಲಾಯಿಸಿ ಈ ಕೆಲಸ ಮಾಡಿಸಿದ್ದಾರೆ. ಈ ಕೆಲಸಕ್ಕೆ ಯುವಕರಿಗೆ ಖರ್ಚಿಗೆ 500 ರಿಂದ 1 ಸಾವಿರ ರುಪಾಯಿ ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ರೌಡಿಗಳು ತಮ್ಮ ಇರುವಿಕೆ ತೋರಿಸಲು ಹಾಗೂ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಬಿಲ್ಡಪ್ ಪಡೆಯುತ್ತಿದ್ದಾರೆ. ಕುಖ್ಯಾತ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ, ಕುಣಿಗಲ್ ಗಿರಿ, ಸೈಕಲ್ ರವಿ, ಜೇಡರಹಳ್ಳಿ ಕೃಷ್ಣ ಸೇರಿ ಹಲವು ರೌಡಿಗಳ ಪರ ಜಾಲತಾಣಗಳಲ್ಲಿ ಈ ಬಿಲ್ಡಪ್ ವಿಡಿಯೋಗಳು ಹರಿದಾಡುತ್ತಿದ್ದವು.