ಫೆಂಗಲ್ ಚಂಡಮಾರುತದಿಂದಾಗಿ ನಗರದ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆ ಕಡಿಮೆಯಾಗಿದೆ. ಈರುಳ್ಳಿ ದರ ಭಾರೀ ಹೆಚ್ಚಾಗಿದ್ದರೆ, ಟೊಮೆಟೋ ಸೇರಿ ಬಹುತೇಕ ಎಲ್ಲ ತರಕಾರಿಗಳ ಬೆಲೆಯೂ ಗಗನಕ್ಕೇರಿದ್ದು ಗ್ರಾಹಕರು ಕಂಗಾಲಾಗಿಬಿಟ್ಟಿದ್ದಾರೆ.
ಉತ್ತಮ ಗುಣಮಟ್ಟದ ಪ್ರಥಮ ದರ್ಜೆ ಈರುಳ್ಳಿ ದರ ₹80-90 ತಲುಪಿದ್ದರೆ, ಟೊಮೆಟೋ 60 ವರೆಗೂ ಮಾರಾಟವಾಗಿದೆ. ಹಾಪ್ ಕಾಮ್ಸ್ ನಲ್ಲಿ ಈರುಳ್ಳಿ ಕೆಜಿ 100ಕ್ಕೆ ಮಾರಾಟವಾಗಿದ್ದರೆ ಬೆಳ್ಳುಳ್ಳಿ ಕೇಜಿಗೆ 547 ಆಗಿ ದಾಖಲೆ ಬರೆದಿದೆ. ಸಾಮಾನ್ಯ ಮಾರುಕಟ್ಟೆಯಲ್ಲೂ ಬೆಳ್ಳುಳ್ಳಿ ಗರಿಷ್ಠ ₹400 ₹500 ಬೆಲೆಯಿತ್ತು. ನಿತ್ಯ ಅಗತ್ಯವಾದ ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪು ಕ್ರಮವಾಗಿ ಕೇಜಿಗೆ ₹98- ₹155 ಮತ್ತು 135 ರಷ್ಟಿತ್ತು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರದ ರೈತರಿಂದ ಬೆಂಗಳೂರಿಗೆ ತರಕಾರಿ ಕಡಿಮೆ ಪೂರೈಕೆಯಾಗುತ್ತಿದೆ. ಆದರೆ ಬರುತ್ತಿರುವ ತರಕಾರಿ ಕಳಪೆಯಾಗಿದೆ. ಹೀಗಾಗಿ ದರ ಹೆಚ್ಚಳವಾಗುತ್ತಿದೆ. ಮಳೆಯಿಂದಾಗಿ ಬೆಳೆಗೆ ಹಾನಿ ಆಗಿರುವುದರಿಂದ ಕಲಾಸಿಪಾಳ್ಯಕ್ಕೆ ಟೊಮೆಟೋ ತೀರಾ ಕಡಿಮೆ ಬರುತ್ತಿದೆ. ಸಾಮಾನ್ಯವಾಗಿ ಬೇಸಿಗೆಯ ಏಪ್ರಿಲ್-ಮೇ ತಿಂಗಳಲ್ಲಿ ಟೊಮೆಟೋ ಬೆಲೆ ಏರುತ್ತದೆ. 12 ಕೇಜಿ ಬಾಕ್ನ ಸಗಟು ದರವೇ ₹480 ಇತ್ತು. ಈ ಬಾರಿ, ಮಳೆ ಮತ್ತು ಮೋಡ ಕವಿದ ವಾತಾವರಣ ಮತ್ತು ಚಳಿಗಾಲದಿಂದ ಬೆಳೆ ಹಾಳಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ ಎಂದು ವ್ಯಾಪಾರಿಗಳು ಹೇಳಿದರು.
ಜತೆಗೆ, ಸೀಸನ್ ಆರಂಭದಿಂದ ಯಶವಂತಪುರ, ದಾಸನಪುರ ಎಪಿಎಂಸಿಗೆ ಮಾರುಕಟ್ಟೆಗೆ ಕರ್ನಾಟಕದ ಈರುಳ್ಳಿ ಕಡಿಮೆಯೇ ಬರುತ್ತಿದೆ. ಈ ವಾರದ ಮಳೆಯ ಪರಿಣಾಮ ಈರುಳ್ಳಿಯ ಗುಣಮಟ್ಟ ಹಾಳಾಗಿದೆ. ಈರುಳ್ಳಿಯ ಸಗಟು ಬೆಲೆಯೇ 65 – ₹70 ಆಗಿದೆ ಎಂದು ವರ್ತಕರು ತಿಳಿಸಿದ್ದಾರೆ. ಜತೆಗೆ ನಗರದ ಅಲ್ಲಲ್ಲಿ ಎನ್ ಸಿಸಿಎಫ್ನಿಂದ ಕಡಿಮೆ ಬೆಲೆಗೆ ಮಾರಲಾಗುತ್ತಿರುವ ಚಿಕ್ಕ ಗಾತ್ರದ ಈರುಳ್ಳಿಗೆ ಬೇಡಿಕೆ ಬಂದಿದೆ.
ಬೆಳ್ಳುಳ್ಳಿಯನ್ನು ಕೇಜಿಗೆ ₹480-₹500 ನಂತೆ ಮಾರುತ್ತಿದ್ದೇವೆ ಎಂದು ವಿಜಯನಗರದ ತರಕಾರಿ ವ್ಯಾಪಾರಿ ಹೇಳಿದರು. ಗುಜರಾತ್ ಬೆಳ್ಳುಳ್ಳಿ ದರ ಇದಾಗಿದೆ. ಉಳಿದಂತೆ ಮಧ್ಯಪ್ರದೇಶ, ಗುಜರಾತ್ನಿಂದ ಬೆಳ್ಳುಳ್ಳಿ ಬರುತ್ತಿದೆ. ಹೀಗಾಗಿ ಬೆಲೆ ಹೆಚ್ಚಳಗೊಂಡಿದೆ. ಚೀನಾ ಬೆಳ್ಳುಳ್ಳಿಯಿಂದ ಕಾಯಿಲೆ ಎಂಬ ಸುದ್ದಿಯಿಂದಾಗಿಯೂ ಬೆಲೆ ಹೆಚ್ಚಳಗೊಂಡಿದೆ ಎಂದು ತಿಳಿಸಿದರು.
ಇನ್ನು ಚಳಿಗಾಲದ ನೆಚ್ಚಿನ ಸೊಗಡವರೆ ಬೆಳೆ ಮಾರುಕಟ್ಟೆಗೆ ಇನ್ನೂ ಬಂದಿಲ್ಲ. ಕಡಿಮೆ ಪ್ರಮಾಣದಲ್ಲಿ ಬಂದಿದ್ದರೂ ಸೊಗಡು ಇರದ ಕಾರಣಕ್ಕೆ ಹೆಚ್ಚಿನ ಗ್ರಾಹಕರು ಇಷ್ಟಪಡುತ್ತಿಲ್ಲ. ಈ ಕಾರಣದಿಂದ ಬೆಲೆ ಹೆಚ್ಚಳಗೊಂಡಿದ್ದು, ಸದ್ಯದ ದರ ಪ್ರತಿ ಕೇಜಿಗೆ ₹95-110 ಗಳಾಗಿವೆ. ಡಿಸೆಂಬರ್ ಅಂತ್ಯ, ಸಂಕ್ರಾಂತಿ ವೇಳೆಗೆ ಹುಣಸೂರಿನ ಅವರೆ ಬರಲಿದ್ದು, ಆಗಿನ ಬೆಲೆ ಕಾದುನೋಡಬೇಕು ಎಂಬುದು ವ್ಯಾಪಾರಿಗಳು ಹೇಳುತ್ತಾರೆ. ಇನ್ನು, ನುಗ್ಗಿಕಾಯಿ ಕೂಡಾ ಮಾರುಕಟ್ಟೆಯಲ್ಲಿ ವಿರಳವಾಗಿದ್ದು, ಒಂದಕ್ಕೆ ₹12- ₹13 ನಂತೆ ಮಾರಲಾಗುತ್ತಿದೆ.