ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ‘ಅತ್ಯಂತ ಗಂಭೀರ’ ಮಟ್ಟಕ್ಕೆ ತಲುಪಿದ್ದು, ಜನರು ವಾಸಿಸಲು ಯೋಗ್ಯವಲ್ಲದ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆ, ಭಾನುವಾರದಿಂದ ಟ್ರಕ್ಗಳು ನಗರ ಪ್ರವೇಶಿಸುವುದನ್ನು ಮತ್ತು ಸಾರ್ವಜನಿಕ ನಿರ್ಮಾಣ ಕಾಮಗಾರಿಗಳನ್ನು ತಾತ್ಕಾಲಿಕ ನಿಷೇಧಿಸಲಾಗಿದೆ.
10 ಮತ್ತು 12ನೇ ಶಾಲಾ ತರಗತಿಗಳನ್ನು ಹೊರತುಪಡಿಸಿ, ಇತರ ಎಲ್ಲಾ ತರಗತಿಗಳು ಮುಂದಿನ ಆದೇಶದವರೆಗೆ ಆನ್ಲೈನ್ ಮೂಲಕ ನಡೆಯಲಿದೆ ಎಂದು ಮುಖ್ಯಮಂತ್ರಿ ಅತಿಶಿ ಮರ್ಲೆನಾ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳ ಪ್ರಕಾರ, ಇಂದು ಬೆಳಗ್ಗೆ 8 ಗಂಟೆಯ ಹೊತ್ತಿಗೆ ದೈನಂದಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ಅಥವಾ ಎಕ್ಯೂಐ 484 ರಷ್ಟಿತ್ತು. ಭಾನುವಾರ ಸಂಜೆ 4 ಗಂಟೆ ಹೊತ್ತಿಗೆ ಈ ಮಟ್ಟ 441 ಮತ್ತು 7 ಗಂಟೆಯ ಹೊತ್ತಿಗೆ 457 ಆಗಿತ್ತು.
ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ, ಗಾಳಿಯ ಸೂಚ್ಯಂಕ 0 ಯಿಂದ 50 ರ ನಡುವೆ ಇದ್ದರೆ, ಉತ್ತಮ ಗುಣಮಟ್ಟ, 51 ರಿಂದ 100ರ ನಡುವೆ ಇದ್ದರೆ ‘ತೃಪ್ತಿದಾಯಕ ಗುಣಮಟ್ಟ’, 101 ರಿಂದ 200ರ ನಡುವೆ ಇದ್ದರೆ ‘ಮಧ್ಯಮ ಗುಣಮಟ್ಟ’, 201 ರಿಂದ 300 ರ ನಡುವೆಯಿದ್ದರೆ ‘ಕಳಪೆ ಗುಣಮಟ್ಟ’, 301 ರಿಂದ 400ರ ನಡುವೆಯಿದ್ದರೆ ‘ಅತ್ಯಂತ ಕಳಪೆ ಗುಣಮಟ್ಟ. ಆದರೆ, ದೆಹಲಿಯ ಗಾಳಿಯ ಸೂಚ್ಯಂಕ 500ರ ಸನಿಹ ತಲುಪಿದೆ. ಇದರಿಂದ ಮಾಲಿನ್ಯದ ಪ್ರಮಾಣ ಅರ್ಥೈಸಬಹುದು.
ಗಾಳಿಯ ಸೂಚ್ಯಂಕ 401 ರಿಂದ 450ರ ನಡುವೆಯಿದ್ದರೆ ‘ತೀವ್ರ ಕಳಪೆ ಗುಣಮಟ್ಟ’ವನ್ನು ಸೂಚಿಸುತ್ತದೆ. ಇನ್ನು 450ರ ಮಿತಿಗಿಂತ ಹೆಚ್ಚಿದ್ದರೆ, ‘ತೀವ್ರ ಪ್ಲಸ್’ ಎಂದು ಕರೆಯಲಾಗುತ್ತದೆ. ಈ ಹಂತಗಳಲ್ಲಿ, ಆರೋಗ್ಯವಂತ ಜನರು ವಾಯು ಮಾಲಿನ್ಯಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಕಾಯಿಲೆಗಳನ್ನು ಉಂಟಾಗುತ್ತದೆ.
ಏರುತ್ತಿರುವ ವಾಯು ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ (ಎನ್ಸಿಆರ್) ವಾಯು ಗುಣಮಟ್ಟ ನಿರ್ವಹಣೆಯ ಆಯೋಗವು ಸೋಮವಾರದಿಂದ ‘ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್’ ಅಥವಾ GRAPಯ ಹಂತ 4ರ ಅನುಷ್ಠಾನಕ್ಕೆ ಆದೇಶ ನೀಡಿದೆ.
GRAP ಎಂಬುವುದು ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಕೈಗೊಳ್ಳುವ ಕ್ರಮಗಳ ಒಂದು ಗುಂಪಾಗಿದೆ. ಇದರ ಅನುಷ್ಠಾನದ ಮೂಲಕ ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ ಮಟ್ಟವನ್ನು ಮತಷ್ಟು ಹೆಚ್ಚಾಗದಂತೆ ತಡೆಯಲು ಪ್ರಯತ್ನಿಸಲಾಗುತ್ತದೆ. ಈ ಕ್ರಮಗಳಲ್ಲಿ ಲಾಕ್ಡೌನ್ನಂತಹ ಕಠಿಣ ಆದೇಶಗಳೂ ಒಳಗೊಂಡಿವೆ.
ಗಾಳಿಯ ಗುಣಮಟ್ಟ ಕಳಪೆಯಾದರೆ, GRAPಯ 1ನೇ ಹಂತವನ್ನು ಜಾರಿಗೆ ತರಲಾಗುತ್ತದೆ. ಅತ್ಯಂತ ಕಳೆಪೆಯಾದರೆ ಮತ್ತು ತೀವ್ರ ಕಳಪೆ ಪ್ಲಸ್ ಆದರೆ, ಎರಡು, ಮೂರು ಮತ್ತು 4ನೇ ಹಂತಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ.
ಅಗತ್ಯ ವಸ್ತುಗಳನ್ನು ಸಾಗಿಸುವ ಮತ್ತು ಶುದ್ಧ ಇಂಧನವನ್ನು ಬಳಸುವ ಟ್ರಕ್ಗಳನ್ನು ಹೊರತುಪಡಿಸಿ, ಇತರ ಟ್ರಕ್ಗಳ ನಗರ ಪ್ರವೇಶವನ್ನು ದೆಹಲಿ ಸರ್ಕಾರ ತಾತ್ಕಾಲಿಕ ನಿಷೇಧಿಸಿದೆ. ಶಾಲಾ ತರಗತಿಗಳು ಆನ್ಲೈನ್ ಮೂಲಕ ನಡೆಸುವಂತೆ ಮತ್ತು ಕಚೇರಿಗಳು ಶೇ.50 ಸಾಮಾರ್ಥ್ಯದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶಿಸಿದೆ. ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡುವಂತೆ ಸೂಚಿಸಿದೆ.
ಎಲೆಕ್ಟ್ರಿಕ್, ಸಿಎನ್ಜಿ ಮತ್ತು ಬಿಎಸ್-VI ಹೊರತುಪಡಿಸಿ, ದೆಹಲಿಯ ಹೊರಗಿನ ನೋಂದಣಿ ಹೊಂದಿರುವ, ಅನಿವಾರ್ಯವಲ್ಲದ ಲಘು ವಾಣಿಜ್ಯ ವಾಹನಗಳ ನಗರ ಪ್ರವೇಶವನ್ನೂ ನಿಷೇಧಿಸಲಾಗುವುದು” ಎಂದು ಸರ್ಕಾರ ಹೇಳಿದೆ. ಮಕ್ಕಳು, ವೃದ್ಧರು ಮತ್ತು ಉಸಿರಾಟ ಅಥವಾ ಇತರ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸಲು ಮತ್ತು ಸಾಧ್ಯವಾದಷ್ಟು ಮನೆಯೊಳಗೆ ಇರಲು ಮನವಿ ಮಾಡಿದೆ.