ಸಮುದ್ರದಲ್ಲಿ ಮುಳುಗಡೆಯಾಗಿರುವ ರಾಮಸೇತುವಿನ ನಕ್ಷೆಯನ್ನು ಇಸ್ರೋ ಬಿಡುಗಡೆ ಮಾಡಿದೆ. ಇದು ಪ್ರಾಚೀನ ಕಾಲದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ರಸ್ತೆ ಸಂಪರ್ಕ ಕಲ್ಪಿಸುತ್ತಿತ್ತು ಎಂಬ ವಾದಕ್ಕೆ ಈಗ ಮತ್ತಷ್ಟು ಪುಷ್ಟಿ ದೊರಕಿದಂತಾಗಿದೆ.
ಐಸಿಇ ಸ್ಯಾಟ್ ಉಪಗ್ರಹದ 2018ರಿಂದ 2023 ರವರೆಗಿನ ಮಾಹಿತಿಯನ್ನ ಆಧರಿಸಿ ಈ ಮ್ಯಾಪ್ ರಚಿಸಲಾಗಿದೆ. ತಮಿಳುನಾಡಿನ ಧನುಷ್ಕೋಡಿಯಿಂದ ಶ್ರೀಲಂಕಾದ ತಲೈಮನ್ನಾರ್ ಗೆ ಈ ಸೇತುವೆ ಸಂಪರ್ಕ ಕಲ್ಪಿಸಲಿದ್ದು, 1 ರೈಲು ಬೋಗಿಯಷ್ಟು ಅಗಲವಾಗಿದೆ. ಈ ಸೇತುವೆಯ ಶೇ. 99.98 ರಷ್ಟು ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ಸಂಶೋಧಕ ಗಿರಿಬಾಬು ದಂಡಾಬತುಲಾ ಹೇಳಿದ್ದಾರೆ.
ಇಡೀ ಸೇತುವೆಯಲ್ಲಿ 11 ಕಡೆ ಸಣ್ಣ ಸಣ್ಣ ಕಾಲುವೆಗಳಿರುವುದನ್ನು ಈ ಸಂಶೋಧನೆ ಪತ್ತೆ ಮಾಡಿದೆ. ಈ ಕಾಲುವೆಗಳು ಪಾಕ್ ಜಲಸಂಧಿಯಿಂದ ಮನ್ನಾರ್ಖಾರಿಗೆ ನೀರು ಸುಲಭವಾಗಿ ಹರಿದುಹೋಗಲು ಸಹಾಯ ಮಾಡುತ್ತದೆ. ಹೀಗಾಗಿ ಈ ಸೇತುವೆ ಮಾನವ ನಿರ್ಮಿತವಾಗಿವೆ. ರಾಮೇಶ್ವರಂನಲ್ಲಿರುವ ಶಾಸನದ ಮಾಹಿತಿಯ ಪ್ರಕಾರ 1480 ರ ವರೆಗೆ ಈ ಸೇತುವೆ ನೀರಿನ ಮೇಲ್ಭಾಗದಲ್ಲಿ ಕಾಣುತ್ತಿತ್ತು. ಬಳಿಕ ಭಾರಿ ಪ್ರವಾಹಕ್ಕೆ ಸಿಲುಕಿ ನಾಶವಾಯಿತು ಎನ್ನಲಾಗಿದೆ.