ನವದೆಹಲಿ: ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವೆಂದು ಹೇಳಿಕೊಂಡಿರುವ ಬಿಜೆಪಿ 2024ರ ಮಾ.31ಕ್ಕೆ ಅನ್ವಯವಾಗುವಂತೆ ಒಟ್ಟಾರೆ 7,113.80 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಕಾಂಗ್ರೆಸ್ ಬಳಿ 857.15 ಕೋಟಿ ರೂ. ಮೊತ್ತವಿದೆ ಎಂದು ಆಯೋಗ ವಿವರ ನೀಡಿದೆ.
ಚುನಾವಣಾ ಆಯೋಗಕ್ಕೆ ಒದಗಿಸಿದ ಅಂಕಿ-ಅಂಶಗಳ ಪ್ರಕಾರ, ಲೋಕಸಭೆ ಚುನಾವಣೆ ಘೋಷಣೆಯಾದ ವೇಳೆ 2023-24ರ ಅವಧಿಯಲ್ಲಿ ಬಿಜೆಪಿ 1,754.06 ಕೋಟಿ ರೂ. ಖರ್ಚು ಮಾಡಿದೆ. 2022-23ರಲ್ಲಿ ಖರ್ಚು ಮಾಡಿದ್ದಕ್ಕೆ ಹೋಲಿಸಿದರೆ ಈ ಪ್ರಮಾಣದಲ್ಲಿ 1,092 ಕೋಟಿ ರೂ. ಗಿಂತ ಹೆಚ್ಚು ಅಂದರೆ ಖರ್ಚಿನಲ್ಲಿ ಶೇ.60 ರಷ್ಟು ಏರಿಕೆಯಾಗಿದೆ.
2023-24ರಲ್ಲಿ ಕಾಂಗ್ರೆಸ್ 619.67 ಕೋಟಿ ರೂ. ಖರ್ಚು ಮಾಡಿದ್ದರೆ, 2022-23ರಲ್ಲಿ 192.56 ಕೋಟಿ ರೂ. ಖರ್ಚು ಮಾಡಿತ್ತು. 2023-24ರ ಅವಧಿಯಲ್ಲಿ ಬಿಜೆಪಿಯು (ನಿಷೇಧಿತ ಚುನಾವಣಾ ಬಾಂಡ್ಗಳ ಮೂಲಕ) 1,685.69 ಕೋಟಿ ರೂ. ಕೊಡುಗೆ ಸ್ವೀಕರಿಸಿದ್ದರೆ, 2022-23ರಲ್ಲಿ 1294.15 ಕೋಟಿ ರೂ. ಹಣವನ್ನು ದಾನದ ರೂಪದಲ್ಲಿ ಸ್ವೀಕರಿಸಿದೆ. ಇದರ ಜತೆಗೆ, ಬಿಜೆಪಿ 2023-24 ರಲ್ಲಿ 2,042.75 ಕೋಟಿ ರೂ. ಮತ್ತು 2022-23ರಲ್ಲಿ 648.42 ಕೋಟಿ ರೂ.ಗಳನ್ನು ಇತರ ಮೂಲಗಳಿಂದ ಕೊಡುಗೆಯಾಗಿ ಸ್ವೀಕರಿಸಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಬಿಜೆಪಿ ಸ್ವೀಕರಿಸಿದ ದೇಣಿಗೆ- ಮಾಡಿದ ವೆಚ್ಚಗಳ ವಿವರ
- ಚುನಾವಣಾ ಬಾಂಡ್ಗಳ (ಈಗ ನಿಷೇಧಿತ) ಮೂಲಕ 2023-24ರಲ್ಲಿ ₹1685.69 ಕೋಟಿ ಹಾಗೂ 2022-23ರಲ್ಲಿ ₹1294.15 ಕೋಟಿ ಸ್ವೀಕಾರ
- ಇತರ ಮೂಲಗಳ ದೇಣಿಗೆಯಿಂದ 2023-24ರಲ್ಲಿ ₹2042.75 ಕೋಟಿ ಹಾಗೂ ಅದರ ಹಿಂದಿನ ಹಣಕಾಸು ವರ್ಷದಲ್ಲಿ ₹648.42 ಕೋಟಿ ಸ್ವೀಕಾರ
- 2023-24ರಲ್ಲಿ ಜಾಹೀರಾತುಗಳಿಗಾಗಿ ₹591 ಕೋಟಿ ವೆಚ್ಚ. ಈ ಮೊತ್ತವು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಜಾಹೀರಾತಿಗಳಿಗೆ ₹434.84 ಕೋಟಿ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಗೊಂಡ ಜಾಹೀರಾತುಗಳಿಗೆ ಮಾಡಿದ ವೆಚ್ಚ ₹115.62 ಕೋಟಿ ಒಳಗೊಂಡಿದೆ.
- 2023-24ರಲ್ಲಿ ವಿಮಾನಗಳು/ಹೆಲಿಕಾಪ್ಟರ್ಗಳ ಬಳಕೆಗೆ ಸಂಬಂಧಿಸಿ ₹174 ಕೋಟಿ ವೆಚ್ಚ. 2022-23ರಲ್ಲಿ ಇದೇ ಉದ್ದೇಶಗಳಿಗೆ ಮಾಡಿದ್ದ ಖರ್ಚು ₹78.23 ಕೋಟಿ.
- ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕಾಗಿ ಕ್ರಮವಾಗಿ ₹191.06 ಕೋಟಿ (2023-24) ಹಾಗೂ ₹75.05 ಕೋಟಿ (2022-23) ವ್ಯಯ.
- ಪಕ್ಷದ ಸಭೆಗಳಿಗಾಗಿ 2024ರಲ್ಲಿ ₹84.32 ಕೋಟಿ ವೆಚ್ಚ. 2023-24ನೇ ಸಾಲಿನಲ್ಲಿ ಪಕ್ಷದ ವಿವಿಧ ಮೋರ್ಚಾಗಳ ರ್ಕ್ಯಾಲಿಗಳು ಆಂದೋಲನ ಹಾಗೂ ಕಾಲ್ ಸೆಂಟರ್ ವೆಚ್ಚವಾಗಿ ₹75.14 ಕೋಟಿ ಬಳಕೆ.
ಕಾಂಗ್ರೆಸ್ ಸ್ವೀಕರಿಸಿದ ದೇಣಿಗೆ- ಮಾಡಿದ ವೆಚ್ಚಗಳ ವಿವರ
- 2023-24ರಲ್ಲಿ ಚುನಾವಣಾ ಬಾಂಡ್ಗಳ (ಈಗ ನಿಷೇಧಿಸಲಾಗಿದೆ) ಮೂಲಕ ₹828.36 ಕೋಟಿ ಸಂಗ್ರಹ. ದೇಣಿಗೆ ಹಾಗೂ ಅನುದಾನಗಳ ಮೂಲಕ ₹1129.67 ಕೋಟಿ ಸೇರಿದಂತೆ ಒಟ್ಟು ₹1225.11 ಕೋಟಿ ಸ್ವೀಕಾರ
- ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ₹207.94 ಕೋಟಿ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಪ್ರಚಾರಕ್ಕಾಗಿ ₹43.73 ಕೋಟಿ ವ್ಯಯ (2023-24)
- 2023-24ರಲ್ಲಿ ವಿಮಾನಗಳು/ಹೆಲಿಕಾಪ್ಟರ್ಗಳ ಬಳಕೆಗೆ ಸಂಬಂಧಿಸಿ ₹62.65 ಕೋಟಿ ವೆಚ್ಚ.
- 2023-24ನೇ ಸಾಲಿನಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕಾಗಿ ₹238.55 ಕೋಟಿ ವ್ಯಯ. 2024 ಮಾರ್ಚ್ 31ಕ್ಕೆ ಕೊನೆಗೊಂಡ ಅವಧಿಯಲ್ಲಿ ಪ್ರಚಾರ ಕಾರ್ಯಕ್ಕಾಗಿ ₹28.03 ಕೋಟಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರಕ್ಕಾಗಿ ₹79.78 ಕೋಟಿ ವೆಚ್ಚ.
- ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ ಜೋಡೊ ನ್ಯಾಯ ಯಾತ್ರೆಗೆ ₹49.63 ಕೋಟಿ ವೆಚ್ಚ. 2022-23ನೇ ಸಾಲಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಡೆದಿದ್ದ ಭಾರತ ಜೋಡೊ ಯಾತ್ರೆಗೆ ₹71.84 ಕೋಟಿ ವ್ಯಯ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc