ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ್ 233 ರನ್ಗಳಿಸಿದರೆ, ಟೀಮ್ ಇಂಡಿಯಾ 285 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ್ ತಂಡವನ್ನು 146 ರನ್ಗಳಿಗೆ ಭಾರತೀಯ ಬೌಲರ್ಗಳು ಆಲೌಟ್ ಮಾಡಿದ್ದರು. ಈ ಮೂಲಕ 95 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಏಳು ವಿಕೆಟ್ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಐದು ದಿನಗಳ ಟೆಸ್ಟ್ ಪಂದ್ಯ… ಅದರರಲ್ಲಿ ಎರಡುವರೆ ದಿನದಾಟಗಳು ಮಳೆಗೆ ಆಹುತಿ. 4ನೇ ದಿನದಾಟದಲ್ಲೂ ಮೊದಲ ಇನಿಂಗ್ಸ್ ಮುಂದುವರೆಸಿದ್ದ ಎದುರಾಳಿ ತಂಡ… ಇಂತಹದೊಂದು ಸನ್ನಿವೇಶ ಕಂಡು ಬಂದರೆ ಈ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವುದು ಸಾಮಾನ್ಯ. ಆದರೆ ಭಾರತ ತಂಡ ಅಂತಹ ಡ್ರಾಗೆ ಸಿದ್ಧವಾಗಿರಲಿಲ್ಲ. ಸಿಕ್ಕ ಕೆಲವೇ ಕೆಲವು ಓವರ್ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.
ನಾಲ್ಕನೇ ದಿನದಾಟದಲ್ಲಿ ಮೊದಲ ಇನಿಂಗ್ಸ್ ಆಡುತ್ತಿದ್ದ ಬಾಂಗ್ಲಾದೇಶ್ ತಂಡವನ್ನು ಕೇವಲ 233 ರನ್ಗಳಿಗೆ ಆಲೌಟ್ ಮಾಡಿದ ಟೀಮ್ ಇಂಡಿಯಾ ಅದೇ ದಿನ ಕೇವಲ 33.4 ಓವರ್ಗಳಲ್ಲಿ 285/9 ರನ್ಗಳಿಸಿ ಡಿಕ್ಲೇರ್ ಘೋಷಿಸಿತು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವನ್ನು ಐದನೇ ದಿನದಾಟದಲ್ಲಿ 146 ರನ್ಗಳಿಗೆ ಆಲೌಟ್ ಮಾಡಿತು. ಈ ಮೂಲಕ 95 ರನ್ಗಳ ಗುರಿ ಪಡೆದು ಟೀಮ್ ಇಂಡಿಯಾ ಅಂತಿಮ ದಿನದಾಟದಲ್ಲಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿತು.
ಇಂತಹದೊಂದು ಅಮೋಘ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಈ ಫಲಿತಾಂಶಕ್ಕಾಗಿ ಮಾಡಿಕೊಂಡ ಸಿದ್ಧತೆಗಳನ್ನು ಬಹಿರಂಗಪಡಿಸಿದ್ದಾರೆ. ನಮ್ಮ ಮೊದಲ ಪ್ಲ್ಯಾನ್ ಬಾಂಗ್ಲಾದೇಶ್ ತಂಡವನ್ನು ನಾಲ್ಕನೇ ದಿನದಾಟದಲ್ಲೇ ಆಲೌಟ್ ಮಾಡುವುದಾಗಿತ್ತು. ಇದಕ್ಕಾಗಿ ನಾವು ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು.
ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ನಾನು ಸಹ ಕ್ರಿಕೆಟ್ ಆಡಿದ್ದೇನೆ. ಹೀಗಾಗಿ ಅವರ ಮನಸ್ಥಿತಿ ಏನು? ಏನು ಮಾಡಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ನಾಲ್ಕನೇ ದಿನದಾಟದಲ್ಲಿ ಬಾಂಗ್ಲಾ ತಂಡವನ್ನು ಆಲೌಟ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ಲ್ಯಾನ್ ರೂಪಿಸಿದೆವು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಬಾಂಗ್ಲಾದೇಶ್ ತಂಡವನ್ನು 233 ರನ್ಗಳಿಗೆ ಆಲೌಟ್ ಆದಾಗ ನಾವು ಈ ಸ್ಕೋರ್ ಬಗ್ಗೆ ಯೋಚಿಸಿರಲಿಲ್ಲ. ಬದಲಾಗಿ ನಮಗೆ ಎಷ್ಟು ಓವರ್ಗಳನ್ನು ಆಡಲು ಸಿಗಲಿದೆ ಎಂಬುದರ ಲೆಕ್ಕಾಚಾರವನ್ನು ಹಾಕಲಾಗಿತ್ತು. ಹೀಗಾಗಿ ತ್ವರಿತ ಗತಿಯಲ್ಲಿ ರನ್ಗಳಿಸಲು ಪ್ಲ್ಯಾನ್ ರೂಪಿಸಿದ್ದೆವು. ಆದರೆ ಈ ಪಿಚ್ನಲ್ಲಿ ಬ್ಯಾಟ್ ಮಾಡುವುದು ಕೂಡ ಸುಲಭವಾಗಿರಲಿಲ್ಲ. ಹೀಗಾಗಿ ಏನು ಬೇಕಾದರೂ ಆಗಬಹುದು ಎಂಬ ಎಚ್ಚರಿಕೆ ನಮ್ಮಲ್ಲಿತ್ತು ಎಂದು ರೋಹಿತ್ ಶರ್ಮಾ ಹೇಳಿದರು.