ನವದೆಹಲಿ: 2050 ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದ್ದು, ಭಾರತವನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗಲಿದೆ ಎಂದು ವರದಿಯೊಂದು ಹೇಳಿದೆ.
ಈ ಪ್ರಪಂಚವು ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ, ಜೈನ , ಸಿಖ್ ಹೀಗೆ ವಿವಿಧ ಧರ್ಮಗಳ ಜನರಿಗೆ ನೆಲೆಯಾಗಿದೆ. ಇನ್ನು ಕೆಲವು ದೇಶಗಳಲ್ಲಿ ಕೆಲವು ಧರ್ಮದ ಜನರನ್ನು ಮಾತ್ರ ಕಾಣಬಹುದು. ಆದರೆ 2050 ರ ವೇಳೆಗೆ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಭಾರತವು ಹೊರಹೊಮ್ಮಲಿದೆಯಂತೆ. ಇದೀಗ ಪ್ಯೂ ರಿಸರ್ಚ್ ಸೆಂಟರ್ ಪ್ರಕಟಿಸಿದ ವರದಿಯಲ್ಲಿ ಭಾರತವು 2050 ರ ವೇಳೆಗೆ (311 ಮಿಲಿಯನ್) ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ ಎನ್ನಲಾಗಿದೆ.
ಮುಸ್ಲಿಮರ ಸಂಖ್ಯೆ ಗಣನೀಯ ಏರಿಕೆ
ಮುಂಬರುವ ದಶಕಗಳಲ್ಲಿ ವಿಶ್ವದ ಜನಸಂಖ್ಯೆಯು ಶೇಕಡಾ 35 ರಷ್ಟು ಬೆಳೆಯುವ ನಿರೀಕ್ಷೆಯಿದ್ದರೂ, ಮುಸ್ಲಿಮರ ಸಂಖ್ಯೆ ಶೇಕಡಾ 73 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಮುಖವಾಗಿ 2050 ರ ಹೊತ್ತಿಗೆ ಮುಸ್ಲಿಮರ ಸಂಖ್ಯೆ 2.8 ಬಿಲಿಯನ್ಗೆ ತಲುಪುತ್ತದೆ. ವಾಸ್ತವವಾಗಿ, ಮುಸ್ಲಿಮರು ಇಡೀ ವಿಶ್ವದ ಜನಸಂಖ್ಯೆಗಿಂತ ವೇಗವಾಗಿ ಬೆಳೆಯುವ ಏಕೈಕ ಪ್ರಮುಖ ಧಾರ್ಮಿಕ ಗುಂಪಾಗಿದೆ.
2050ರ ವೇಳೆಗೆ ಭಾರತವು 31 ಕೋಟಿ ಮುಸ್ಲಿಮರನ್ನು ಹೊಂದಲಿದ್ದು, ಜಾಗತಿಕ ಮುಸ್ಲಿಂ ಜನಸಂಖ್ಯೆಯ 11% ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಫಲವತ್ತತೆಯ ಪ್ರಮಾಣದಿಂದಾಗಿ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ. 2010 ರಲ್ಲಿ, ಮುಸ್ಲಿಮರ ಒಟ್ಟು ಜನಸಂಖ್ಯೆಯ 14.4% ರಷ್ಟಿತ್ತು. ಆದರೆ 2050ರ ವೇಳೆಗೆ ಇದು 18.4% ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.
ಪ್ಯೂ ರಿಸರ್ಚ್ ಸೆಂಟರ್ನ “ದಿ ಫ್ಯೂಚರ್ ಆಫ್ ವರ್ಲ್ಡ್ ರೀಜನ್ಸ್” ಅಧ್ಯಯನವು 2050 ರ ವೇಳೆಗೆ ವಿಶ್ವಾದ್ಯಂತ ಹಿಂದೂ ಜನಸಂಖ್ಯೆಯು ಸುಮಾರು 34% ರಷ್ಟು ಹೆಚ್ಚಾಗುತ್ತದೆ. ಅಂದರೆ 1.03 ಶತಕೋಟಿಗೆ ಏರಿಕೆಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳು 14.9% ರಷ್ಟಿದ್ದಾರೆ. ಕ್ರಿಶ್ಚಿಯನ್ನರು 31.4% ಮತ್ತು ಮುಸ್ಲಿಮರು 29.7% ಇದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಹಿಂದೂಗಳ ಸಂಖ್ಯೆ ಗಣನೀಯ ಇಳಿಕೆ
ವಿಶ್ವದ ಈ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಹಿಂದೂಗಳ ಸಂಖ್ಯೆ ತೀವ್ರಗತಿಯಲ್ಲಿ ಇಳಿಕೆಯಾಗಲಿದೆ. ವರದಿಯ ಪ್ರಕಾರ 2050 ರಲ್ಲಿ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎನ್ನಲಾಗಿದೆ. ಹೌದು, 2010 ರಲ್ಲಿ ಶೇಕಡಾ 1.6 ರಷ್ಟಿದ್ದ ಜನಸಂಖ್ಯೆಯೂ 2050 ರಲ್ಲಿ ಶೇಕಡಾ 1.3 ರಷ್ಟು ಇಳಿಕೆ ಕಾಣಲಿದೆ. ಬಾಂಗ್ಲಾದೇಶದಲ್ಲಿ 2010 ರಲ್ಲಿ ಶೇಕಡಾ 8.5 ರಷ್ಟಿತ್ತು, ಆದರೆ 2050 ರಲ್ಲಿ ಹಿಂದೂಗಳ ಸಂಖ್ಯೆಯೂ ಶೇಕಡಾ 7.2 ಇಳಿಕೆಯಾಗಿದೆ. ಇನ್ನು ಉಳಿದಂತೆ ಅಫ್ಘಾನಿಸ್ತಾನದಲ್ಲಿಯೂ ಶೇಕಡಾ 0.4 ರಿಂದ 0.3 ರಷ್ಟು ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.