ಪಾಕಿಸ್ತಾನ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಹುರುಪಿನಲ್ಲಿ ಕಣಕ್ಕಿಳಿದಿದ್ದ ಬಾಂಗ್ಲಾದೇಶ್ ತಂಡವನ್ನು ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಮಕಾಡೆ ಮಲಗಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡವು 280 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ (113) ಶತಕ ಬಾರಿಸಿದರೆ, ರವೀಂದ್ರ ಜಡೇಜಾ (86) ಹಾಗೂ ಯಶಸ್ವಿ ಜೈಸ್ವಾಲ್ (56) ಅರ್ಧಶತಕ ಸಿಡಿಸಿದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 371 ರನ್ ಕಲೆಹಾಕಿ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವು ಕೇವಲ 149 ರನ್ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇನ್ನು 227 ರನ್ಗಳ ಪ್ರಥಮ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇದಾಗ್ಯೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ (119) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (109) ಶತಕ ಸಿಡಿಸಿದರು. ಈ ಸೆಂಚುರಿಗಳ ನೆರವಿನಿಂದ ಭಾರತ ತಂಡವು 4 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು.