ದೇಶದ 13 ನೇ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು ನೆನ್ನೆ ಚಿರ ನಿದ್ರೆಗೆ ಜಾರಿದ್ದಾರೆ. ಈ ಒಂದು ಆಘಾತಕಾರಿ ಸುದ್ದಿ ದೇಶದ ಜನತೆಗೆ ನಿಜಕ್ಕೂ ಬೇಸರ ತಂದಿದೆ. ಪ್ರಧಾನಮಂತ್ರಿಯಾಗಿ ಮನಮೋಹನ್ ಸಿಂಗ್ ಅವರ ಕೊಡುಗೆ ದೇಶಕ್ಕೆ ಅಪಾರ. ಬರೀ ದೇಶಕ್ಕೆ ಅಷ್ಟಯಲ್ಲ ನಮ್ಮ ರಾಜ್ಯಕ್ಕೂ ಅಭೂತ ಪೂರ್ವ ಕೊಡುಗೆ ಕೊಟ್ಟಿದ್ದಾರೆ ಮನಮೋಹನ್ ಸಿಂಗ್.
ನೆನ್ನೆ ರಾತ್ರಿ ತುರ್ತು ಸುದ್ದಿಗೋಷ್ಠಿ ಕರೆದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ನೀವು ಸಹ ದೆಹಲಿಗೆ ತೆರಳುವಿರಾ ಎಂದು ಕೇಳಿದಾಗ, “ನಾನು ಪಕ್ಷದ ಅಧ್ಯಕ್ಷನಾಗಿ ಮನಮೋಹನ್ ಸಿಂಗ್ ಅವರ ಅಂತಿಮ ದರ್ಶನದಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ. ರಾಜ್ಯದ ಹಿರಿಯ ನಾಯಕರು ಸೇರಿದಂತೆ ಒಂದಷ್ಟು ಮಂದಿ ದೆಹಲಿಗೆ ತೆರಳಲಿದ್ದೇವೆ. ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ಹಾಗೂ ಕೈ ಕೆಳಗೆ ಕೆಲಸ ಮಾಡಿದವರು” ಎಂದು ಹೇಳಿದರು.
ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟವರು ಸಿಂಗ್
“ಮನಮೋಹನ್ ಸಿಂಗ್ ಅವರು ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದವರು. ನರ್ಮ್ ಯೋಜನೆ ಮೂಲಕ ಅನೇಕ ನಗರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದರು. ಬೆಂಗಳೂರಿನ ಅನೇಕ ಮೇಲ್ಸೇತುವೆಗಳು ಇವರು ನೀಡಿದ ಕೊಡುಗೆಗಳು. ಮನ ಮೋಹನ್ ಸಿಂಗ್ ಅವರ ಬಗ್ಗೆ ಮಾತನಾಡಲು ಒಂದು ದಿನವೂ ಸಾಲುವುದಿಲ್ಲ. ಅವರು ದೇಶದ ಎಲ್ಲಾ ವರ್ಗದ ಜನರಿಗೆ ಮರೆಯಲಾಗದ ಕೊಡುಗೆ ಕೊಟ್ಟಿದ್ದಾರೆ. ರೈತರ ಸಾಲಮನ್ನಾ ಮಾಡಿ ಅವರ ಪರವಾಗಿ ದೃಢವಾಗಿ ನಿಂತವರು” ಎಂದು ಸ್ಮರಿಸಿದರು.
“ಪ್ರತಿ ಕೆಲಸದಲ್ಲಿಯೂ ಗಾಂಭೀರ್ಯತೆ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದವರು ಮನಮೋಹನ್ ಸಿಂಗ್ ಅವರು. ಅವರ ಆಡಳಿತ ಕಾಲದಲ್ಲಿ ಬಡವರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನರೇಗಾ ಮೂಲಕ ಗ್ರಾಮೀಣ ಜನರ ಬದುಕಿನಲ್ಲಿ ಉದ್ಯೋಗ ಗ್ಯಾರಂಟಿ ಸೃಷ್ಟಿ ಮಾಡಿದವರು. ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು ಸೇರಿದಂತೆ ಈ ದೇಶವನ್ನು ಗಟ್ಟಿಗೊಳಿಸುವ ಅನೇಕ ಕಾಯ್ದೆಗಳನ್ನು ನೀಡಿದವರು” ಎಂದರು.
“‘ಗಾಂಧಿ ಭಾರತ’ ಕಾರ್ಯಕ್ರಮ ಅಂಗವಾಗಿ ಬೆಳಗಾವಿಯಲ್ಲಿ ಮಾಡಿರುವ ವಿದ್ಯುತ್ ದೀಪಾಲಂಕಾರವನ್ನು ಸಾರ್ವಜನಿಕರ ವೀಕ್ಷಣೆಗೆ ಉಳಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಶುಕ್ರವಾರ ಬೆಳಿಗ್ಗೆ ಮಾಹಿತಿ ನೀಡಲಾಗುವುದು. ಸಾಕಷ್ಟು ಜನರು ದೀಪಾಲಂಕಾರವನ್ನು ವೀಕ್ಷಿಸುತ್ತಿದ್ದಾರೆ. ಈ ಕಾರಣಕ್ಕೆ ಉಳಿಸಿಕೊಳ್ಳುವ ಬಗ್ಗೆ ತೀರ್ಮಾನ ಮಾಡಲಾಗುವುದು” ಎಂದು ಹೇಳಿದರು.