ನ್ಯೂಯಾರ್ಕ್ : ಭಾರತೀಯ ಮೂಲದ ವ್ಯಕ್ತಿ ನ್ಯೂಯಾರ್ಕ್ನ ಸ್ಯಾನ್ ಆಂಟೋನಿಯಾ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಹಲ್ಲೆ ಪ್ರಕರಣದಲ್ಲಿ ಈತನಿಗಾಗಿ ಅಲ್ಲಿನ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. 42 ವರ್ಷದ ಸಚಿನ್ ಸಾಹೂ ಎಂಬಾತ ಏಪ್ರಿಲ್ 21 ರಂದು ಪೊಲೀಸ್ ಅಧಿಕಾರಿ ಗುಂಡೇಟಿಗೆ ಬಲಿಯಾಗಿದ್ದಾನೆ. ಉತ್ತರಪ್ರದೇಶದವನಾಗಿರುವ ಸಚಿನ್ ಸಾಹೂ ಅಮೆರಿಕದ ಪೌರತ್ವ ಪಡೆದು ವಾಸವಾಗಿದ್ದ ಎನ್ನಲಾಗಿದೆ.
ಪೊಲೀಸರ ವರದಿ ಪ್ರಕಾರ ಏ 21 ರಂದು ಸ್ಯಾನ್ ಆಂಟೋನಿಯೋದಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣದ ತನಿಖೆಗೆಂದು ಪೊಲೀಸರು ತೆರಳಿದ್ದರು, ಈ ವೇಳೆ ವಾಹನ ಡಿಕ್ಕಿಯಾಗಿ 51 ವಯಸ್ಸಿನ ಮಹಿಳೆ ಗಾಯಗೊಂಡಿರುವುದು ಕಂಡು ಬಂದಿತ್ತು. ಈ ಅಪಘಾತವನ್ನು ಸಾಹೂ ಉದ್ದೇಶಪೂರ್ವಕವಾಗಿ ಮಾಡಿದ್ದ ಎನ್ನಲಾಗಿದೆ. ಪೊಲೀಸರನ್ನು ಕಂಡ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಸಾಹೂ ಹುಡುಕಾಟಕ್ಕೆ ಮಂದಾದರು.
ಈ ಪ್ರಕರಣದಲ್ಲಿ ಸ್ಯಾನ್ ಆಂಟೋನಿಯೊ ಪೊಲೀಸರು ಸಾಹೂ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ್ದರು. ಬಳಿಕ ಸಾಹೂ ತನ್ನ ಮನೆಗೆ ಮರಳಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಸಾಹೂವನ್ನು ಹಿಡಿಯಲು ಬರುತ್ತಿದ್ದಂತೆ ಆತ ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಆಗ ಕಾರನ್ನು ತಡೆಯಲು ಯತ್ನಿಸಿದ ಪೊಲೀಸರಿಗೆ ಡಿಕ್ಕಿ ಹೊಡೆದಿದ್ದಾನೆ. ತಮ್ಮ ಪ್ರಾಣ ರಕ್ಷಣೆಗೆ ಮುಂದಾದ ಪೊಲೀಸರು ಸಾಹೂ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ತಗುಲುತ್ತಿದ್ದಂತೆ ಸಾಹೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.