ವಿಮಾನಯಾನ ಸಂಸ್ಥೆ ಇಂಡಿಗೊದ ಪ್ರಯಾಣಿಕರ ದಾಖಲೆ ನಿರ್ವಹಣೆಯ ತಂತ್ರಾಂಶ ಮಂದಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಚೆಕ್-ಇನ್, ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ವಿಳಂಬವಾಗಿದೆ ಎಂದು ವರದಿಯಾಗಿದೆ. ಚೆಕ್–ಇನ್ನಲ್ಲಿ ವಿಳಂಬವಾಗುತ್ತಿದ್ದು, ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಇಂಡಿಗೊ ಹೇಳಿದೆ. ‘ದೇಶದಲ್ಲಿ ಇಂಡಿಗೊ ಕಾರ್ಯಾಚರಣೆ ನಡೆಸುವ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ನಮ್ಮ ಆನ್ಲೈನ್ ವ್ಯವಸ್ಥೆ ಮಂದಗತಿಯಲ್ಲಿ ಸಾಗುತ್ತಿದೆ.
ಇದರಿಂದಾಗಿ ಅಂತರ್ಜಾಲತಾಣದ ಮೂಲಕ ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರ ಪರಿಣಾಮ, ಪ್ರಯಾಣಿಕರು ಅಗತ್ಯಕ್ಕಿಂತ ಹೆಚ್ಚಿನ ಸಮಯ ಕಾಯಬೇಕಾಗಿದೆ. ಜತೆಗೆ, ಚೆಕ್-ಇನ್ ಕೂಡಾ ವಿಳಂಬವಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ಜನರು ಸಾಲುಗಟ್ಟಿ ನಿಲ್ಲುವಂತಾಗಿದೆ’ ಎಂದು ಇಂಡಿಗೊ ಸಂಸ್ಥೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡಿದೆ.
ಸಾಧ್ಯವಾದಷ್ಟು ಬೇಗ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದಾಗಿ ಇಂಡಿಗೊ ಹೇಳಿದೆ. ಅಂತರರಾಷ್ಟ್ರೀಯ ಯಾನವನ್ನೂ ಒಳಗೊಂಡು ಇಂಡಿಗೊ ಸಂಸ್ಥೆಯ 2 ಸಾವಿರ ವಿಮಾನಗಳು ನಿತ್ಯ ಹಾರಾಟ ನಡೆಸುತ್ತವೆ.