ಐಫೋನ್ 16 ಫೋನ್ ಮಾರಾಟವನ್ನು ನಿಷೇಧಿಸಿದ ಬಳಿಕ ಇಂಡೋನೇಷ್ಯಾ ಈಗ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ ಮಾರಾಟವನ್ನೂ ನಿರ್ಬಂಧಿಸಿದೆ. ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎಂದು ಇಂಡೋನೇಷಿಯಾದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
40% ರಷ್ಟು ಸ್ಥಳೀಯ ಮೂಲವನ್ನು ಬಳಸಿ ಸ್ಮಾರ್ಟ್ಫೋನ್ ತಯಾರಿಸಬೇಕೆಂಬ ನಿಯಮವನ್ನು ಪೂರೈಸುವವರೆಗೂ ಫೋನ್ ಮಾರಾಟಕ್ಕೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ. ಕಳೆದ ವಾರ ಐಫೋನ್ 16 ಮಾರಾಟವನ್ನು ಇಂಡೋನೇಷ್ಯಾ ನಿಷೇಧಿಸಿತ್ತು. ವಿದೇಶಿ ಹೂಡಿಕೆಗೆ ಉತ್ತೇಜನ, ಸ್ಥಳೀಯ ಜನರಿಗೆ ಉದ್ಯೋಗ ನೀಡುವ ಸಂಬಂಧ ಇಂಡೋಷೇಷ್ಯಾ ಈಗ ಈಗ ದೇಶೀಯ ಕಂಪನಿಗಳ ಸಹಯೋಗದೊಂದಿಗೆ ಫೋನ್ ತಯಾರಿಸಬೇಕೆಂಬ ನಿಯಮವನ್ನು ಜಾರಿ ಮಾಡಿದೆ.
ಇಂಡೋನೇಷ್ಯಾದಲ್ಲಿ ಗೂಗಲ್ ಮತ್ತು ಆಪಲ್ ಕಂಪನಿಗಳು ಹೆಚ್ಚು ಮಾರಾಟವಾಗುವ ಸ್ಮಾರ್ಟ್ಫೋನ್ಗಳಲ್ಲ. ಐಡಿಸಿ ವರದಿಯ ಪ್ರಕಾರ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾದ ಒಪ್ಪೋ ಮತ್ತು ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿಯ ಫೋನ್ಗಳು ಹೆಚ್ಚು ಮಾರಾಟವಾಗಿವೆ.
ಟೆಕ್ ಸೆವಿ ಜನರು ಇರುವ ಕಾರಣ ಜಾಗತಿಕ ಕಂಪನಿಗಳು ಇಂಡೋನೇಷ್ಯಾದ ಮೇಲೆ ಕಣ್ಣಿಟ್ಟಿದೆ. ಭವಿಷ್ಯದಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ದೇಶೀಯ ಉತ್ಪಾದನಾ ವಲಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಂಡೋನೇಷ್ಯಾ ಕೆಲ ಉತ್ತೇಜನ ಕ್ರಮವನ್ನು ಕೈಗೊಂಡಿದೆ.
ಆಪಲ್ ಸಿಇಒ ಟಿಮ್ ಕುಕ್ ಇತ್ತೀಚೆಗೆ ಜಕಾರ್ತದಲ್ಲಿ ಅಧ್ಯಕ್ಷ ಜೋಕೊ ವಿಡೋಡೊ ಅವರನ್ನು ಭೇಟಿಯಾಗಿ ಐಫೋನ್ ಉತ್ಪಾದನೆ ಸಂಬಂಧ ಚರ್ಚಿಸಿದ್ದರು. ಆಪಲ್ ಕಂಪನಿ ಈಗಾಗಲೇ 1.71 ಟ್ರಿಲಿಯನ್ ಇಂಡೋನೇಷ್ಯಾ ರೂಪಿಯಾ ಹೂಡಿಕೆ ಮಾಡುವುದಾಗಿ ಘೋಷಿಸಿದ್ದು, ಇಲ್ಲಿಯವರೆಗೆ 1.48 ಟ್ರಿಲಿಯನ್ ರೂಪಿಯಾ ಹೂಡಿಕೆ ಮಾಡಿದೆ. ಇನ್ನೂ 230 ಶತಕೋಟಿ ರೂಪಿಯಾ ಹೂಡಿಕೆ ಮಾಡಬೇಕಿದೆ. ಇಂಡೋನೇಷ್ಯಾದಲ್ಲಿ ಮಾರಾಟವಾಗುವ ವಿದೇಶಿ ಸಾಧನಗಳಲ್ಲಿ 40% ರಷ್ಟು ದೇಶೀಯ ವಸ್ತುಗಳನ್ನು ಕಡ್ಡಾಯವಾಗಿ ಬಳಸಬೇಕೆಂಬ ನಿಯಮ ಈಗ ಆಪಲ್ ಮತ್ತು ಗೂಗಲ್ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.