ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿದೆ ಎನ್ನುವ ಆರೋಪದ ಬೆನ್ನಲ್ಲೇ ಮತ್ತೊಂದು ಆರೋಪ ಕೇಳಿಬಂದಿದೆ. ತಿರುಪತಿಯ ಪ್ರಸಾದದಲ್ಲಿ ಹುಳುಗಳು ಸಿಕ್ಕಿವೆ ಎಂದು ಭಕ್ತರು ಆರೋಪಿಸಿದ್ದಾರೆ. ದೇವಾಲಯವನ್ನು ನೋಡಿಕೊಳ್ಳುವ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಮ್ ಈ ಆರೋಪವನ್ನು ತಳ್ಳಿಹಾಕಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಟಿಟಿಡಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ತೋರುತ್ತಿದೆ ಎಂದು ಭಕ್ತರೊಬ್ಬರು ಹೇಳಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇವೆಂದು ಹೇಳಿದ್ದಾರೆ.
ಭಕ್ತರೊಬ್ಬರು ಮಾತನಾಡಿ, ನಾನು ವಾರಂಗಲ್ನಿಂದ ತಿಮ್ಮಪ್ಪನ ದರ್ಶನಕ್ಕೆಂದು ತೆರಳಿದ್ದೆ, ಮೊಸರನ್ನ ಊಟ ಮಾಡುವ ಸಮಯದಲ್ಲಿ ಊಟದಲ್ಲಿ ಹುಳು ಸಿಕ್ಕಿತ್ತು. ಈ ವಿಚಾರವನ್ನು ಸಿಬ್ಬಂದಿಗೆ ತಿಳಿಸಿದೆ ಆದರೆ ಅವರ ಪ್ರತಿಕ್ರಿಯೆ ಆಘಾತಕಾರಿಯಾಗಿತ್ತು, ಇದು ಕೆಲವೊಮ್ಮೆ ಸಂಭವಿಸುತ್ತದೆ. ಸರ್ಕಾರ ಬದಲಾದರೂ ಈ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ಉತ್ತರ ಕೊಟ್ಟಿದ್ದರು. ವಿಷಯ ತಿಳಿದ ನಂತರ ದೇವಾಲಯದ ಸಿಬ್ಬಂದಿ ತಮ್ಮನ್ನು ನಿಂದಿಸಲು ಮತ್ತು ಬೆದರಿಸಲು ಪ್ರಯತ್ನಿಸಿದರು ಎಂದು ಭಕ್ತ ಆರೋಪಿಸಿದ್ದಾರೆ. ಸರ್ಕಾರವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನಾವು ಊಟ ಮಾಡುವಾಗ ಮಧ್ಯಾಹ್ನ 1.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ತಿರುಪತಿ ಲಡ್ಡು ವಿವಾದದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್ಎಸ್ಎಸ್ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದು-ಸದಸ್ಯರ ಸ್ವತಂತ್ರ ಎಸ್ಐಟಿಯನ್ನು ರಚಿಸಲು ಸೂಚಿಸಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.