ಕರ್ನಾಟಕದಲ್ಲಿ ತಮ್ಮ ವಹಿವಾಟು ವಿಸ್ತರಿಸಲು ಅಮೆರಿಕದ ಸನ್ಮಿನಾ ಮತ್ತು ಲೀಪ್ಫೈವ್ ಟೆಕ್ನಾಲಜಿ ಕಂಪನಿಗಳು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ. ಬೆಂಗಳೂರಿನಲ್ಲಿ ಮುಂದಿನ ವರ್ಷ ನಡೆಯಲಿರುವ ಹೂಡಿಕೆದಾರರ ಸಮಾವೇಶಕ್ಕೆ ಉದ್ಯಮಿಗಳನ್ನು ಆಹ್ವಾನಿಸಲು ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಅಮೆರಿಕೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಈ ಉದ್ಯಮಗಳ ಪ್ರಮುಖರ ಜೊತೆಗಿನ ಸಮಾಲೋಚನೆಯಲ್ಲಿ ಈ ಇಂಗಿತ ವ್ಯಕ್ತವಾಗಿದೆ.
ತಯಾರಿಕಾ ದಕ್ಷತೆ ಹೆಚ್ಚಿಸುವ ಸೇವೆ ಹಾಗೂ ತಂತ್ರಜ್ಞಾನ ಒದಗಿಸುವಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿ ಇರುವ ಸನ್ಮಿನಾ ಕಂಪನಿಯ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರವು ಸಂಪೂರ್ಣ ಬೆಂಬಲ ನೀಡುವುದಾಗಿ ಸಚಿವ ಪಾಟೀಲ ಅವರು ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸುವ ಸಾಧ್ಯತೆಗಳನ್ನು ಲೀಪ್ಫೈವ್ ಟೆಕ್ನಾಲಜಿಯ ಸಿಇಒ ಶ್ರೀಮತಿ ಅಗ್ಲೈಯಾ ಕಾಂಗ್ ಅವರು ಸಚಿವ ಪಾಟೀಲ ಅವರ ಗಮನಕ್ಕೆ ತಂದಿದ್ದಾರೆ.
ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಸನ್ಮಿನಾ ಮತ್ತು ಲೀಪ್ಫೈವ್ ಟೆಕ್ನಾಲಜಿ ಕಂಪನಿಗಳ ಮುಖ್ಯಸ್ಥರಿಗೆ ಸಚಿವ ಪಾಟೀಲ ಅವರು ಇದೇ ಸಂದರ್ಭದಲ್ಲಿ ಔಪಚಾರಿಕ ಆಹ್ವಾನ ನೀಡಿದ್ದಾರೆ. ಸಚಿವರ ನೇತೃತ್ವದಲ್ಲಿನ ನಿಯೋಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ್ ಅವರು ಇದ್ದರು.