ಇಂದಿನಿಂದ ಮೂರು ದಿನಗಳ ಕಾಲ ಪೋಲೆಂಡ್ ಮತ್ತು ಉಕ್ರೇನ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಈ ಭೇಟಿಯ ಮೂಲಕ ಹಲವು ದಾಖಲೆಗಳಿಗೆ ಕಾರಣವಾಗುವ ಜೊತೆಗೆ ವಿಶೇಷವೊಂದಕ್ಕೂ ಸಾಕ್ಷಿಯಾಗಲಿದ್ದಾರೆ. ಮೊದಲಿಗೆ ಪೋಲೆಂಡ್ಗೆ ತೆರಳಲಿರುವ ಮೋದಿ, ಅಲ್ಲಿಂದ ಉಕ್ರೇನ್ಗೆ ತೆರಳಲು ಮತ್ತು ಉಕ್ರೇನ್ನಿಂದ ಪೋಲೆಂಡ್ ಮರಳಲು ವಿಶೇಷ ರೈಲು ಬಳಸಲಿದ್ದಾರೆ.
ಹೌದು! ಹಾಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ನಿತ್ಯವೂ ಪರಸ್ಪರರ ವಿರುದ್ಧ ವೈಮಾನಿಕ ದಾಳಿ ನಡೆಯುತ್ತಲೇ ಇದೆ. ಹೀಗಾಗಿ ಪೋಲೆಂಡ್ ನಿಂದ ಉಕ್ರೇನ್ ರಾಜಧಾನಿ ಕೀವ್ಗೆ ಮೋದಿ ವಿಶೇಷ ʻಟ್ರೇನ್ ಪೋರ್ಸ್ ಒನ್ʼ ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ.ಹೀಗೆ ಒಂದು ಕಡೆಯ ಸಂಚಾರಕ್ಕೆ 10 ಗಂಟೆಗಳ ಸಮಯ ಬೇಕು. ಅಂದರೆ ಒಟ್ಟಾರೆ 20 ಗಂಟೆಗಳ ಕಾಲ ಮೋದಿ ರೈಲಿನಲ್ಲಿ ಪ್ರಯಾಣ ಮಾಡಬೇಕಿದೆ.
ಮೊದಲಿಗೆ ಈ ರೈಲನ್ನು ಕ್ರಿಮಿಯಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆಂದು ಸಿದ್ಧಪಡಿಸಲಾಗಿತ್ತು. ಆದರೆ ರಷ್ಯಾ ಕ್ರೆಮಿಯಾ ಆಕ್ರಮಿಸಿದ ಬಳಿಕ ಈ ರೈಲನ್ನು ಉಕ್ರೇನ್ಗೆ ಆಗಮಿಸುವ ಗಣ್ಯರ ಸಂಚಾರಕ್ಕೆ ಮೀಸಲಿಡಲಾಗಿದೆ. ಈ ರೈಲು ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಜೊತೆ ಐಷಾರಾಮಿ ಸೌಲಭ್ಯ ಹೊಂದಿದೆ. ಕೆಲ ಸಮಯದ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್, ಜರ್ಮನ್ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಸೇರಿದಂತೆ 200ಕ್ಕೂ ಹೆಚ್ಚು ವಿದೇಶಿ ಗಣ್ಯರು ಉಕ್ರೇನ್ಗೆ ಭೇಟಿ ನೀಡಲು ಇದೇ ರೈಲಿನ ಸೇವೆ ಬಳಸಿದ್ದರು.