ಐಪಿಎಲ್ 2024 ರ 33 ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಇಂದು ಸಂಜೆ 7.30ಕ್ಕೆ ಈ ಪಂದ್ಯ ನಡೆಯಲಿದೆ. ಪಂಜಾಬ್ನಲ್ಲಿರುವ ಮುಲ್ಲನ್ಪುರದ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅಪರೂಪದ ದಾಖಲೆ ಬರೆಯಲಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಈ ಪಂದ್ಯ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾಗೆ ಐಪಿಎಲ್ನಲ್ಲಿ 250 ನೇ ಪಂದ್ಯವಾಗಿದೆ. ಈ ಮೂಲಕ ರೋಹಿತ್ ಶರ್ಮಾ ಐಪಿಎಲ್ನಲ್ಲಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮಾಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಇಂತಹ ಸಾಧನೆ ಮಾಡಿದ್ದರು. ಐಪಿಎಲ್ನಲ್ಲಿ 250ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಪಟ್ಟಿಯಲ್ಲಿ ಎಂಎಸ್ ಧೋನಿ ಮೊದಲಿಗರಾಗಿದ್ದಾರೆ.
ಎಂಎಸ್ ಧೋನಿ ಐಪಿಎಲ್ನಲ್ಲಿ 256 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ತಮ್ಮ ನಾಯಕತ್ವದಲ್ಲಿ ತಮ್ಮ ತಂಡವನ್ನು 5 ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ. ಈಗ ಎಂಎಸ್ ಧೋನಿ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಸಿಎಸ್ಕೆ ಪರ ಆಡುತ್ತಿದ್ದರೆ, ರೋಹಿತ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡುತ್ತಿದ್ದಾರೆ.
ರೋಹಿತ್ ಶರ್ಮಾ ಇದುವರೆಗೆ ಐಪಿಎಲ್ನಲ್ಲಿ 249 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 6472 ರನ್ ಬಾರಿಸಿದ್ದಾರೆ. ಐಪಿಎಲ್ನಲ್ಲಿ 109 ರನ್ ಗಳಿಸಿರುವುದು ರೋಹಿತ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಅಲ್ಲದೇ ಐಪಿಎಲ್ 2024 ರಲ್ಲೂ ರೋಹಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.