- ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು.
- 7ನೇ ಸ್ಥಾನದಲ್ಲಿದ್ದ ಆರ್ಸಿಬಿ ಐದನೇ ಸ್ಥಾನಕ್ಕೆ ಜಂಪ್ ಆಗಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಪ್ಲೇ ಆಫ್ಗೆ ಹೋಗುವ ದಾರಿಯನ್ನು ಜೀವಂತವಾಗಿರಿಸಿಕೊಂಡಿದೆ. ಹಾಗಾದರೆ ಆರ್ ಸಿ ಬಿ ಪ್ಲೇ-ಆಫ್ಗೆ ಹೋಗುವುದು ಹೇಗೆ…
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್ಗಳಿಂದ ಸೋಲಿಸುವ ಮೂಲಕ ಆರ್ಸಿಬಿ ಸತತ ಐದನೇ ಗೆಲುವು ದಾಖಲಿಸಿದೆ. ಈ ಮೂಲಕ ಪ್ಲೇ-ಆಫ್ ರೇಸ್ಗೆ ಮತ್ತಷ್ಟು ಬಲ ಬಂದಿದೆ. ಅಷ್ಟೇ ಅಲ್ಲದೇ 7ನೇ ಸ್ಥಾನದಲ್ಲಿದ್ದ ಆರ್ಸಿಬಿ ಐದನೇ ಸ್ಥಾನಕ್ಕೆ ಜಂಪ್ ಆಗಿದೆ. ಇದುವರೆಗೆ 13 ಪಂದ್ಯಗಳನ್ನು ಆಡಿರುವ ಆರ್ಸಿಬಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ ನೆಟ್ ರನ್ರೇಟ್ನಲ್ಲೂ ಮೇಲುಗೈ ಸಾಧಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆರ್ಸಿಬಿ ಪ್ಲೇ-ಆಫ್ಗೆ ಹೋಗಲು ದಿಟ್ಟ ಹೆಜ್ಜೆ ಇಡುತ್ತಿದ್ದು, ಮೇ 18 ರಂದು ನಡೆಯುವ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಸೋಲಿಸಬೇಕಿದೆ. ಈ ಪಂದ್ಯದಲ್ಲಿ ಸೋತವರು ಮನೆಗೆ ಹೋಗುತ್ತಾರೆ, ಗೆದ್ದವರು ಪ್ಲೇ-ಆಫ್ಗೆ ಎಂಟ್ರಿ ನೀಡುತ್ತಾರೆ.
ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್ಕೆ ತಂಡ ಪಾಯೀಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದೆ. 13 ಪಂದ್ಯಗಳನ್ನು ಆಡಿರುವ ಚೆನ್ನೈ 7 ಪಂದ್ಯದಲ್ಲಿ ಗೆದ್ದು 14 ಅಂಕಗಳನ್ನು ಗಳಿಸಿಕೊಂಡಿದೆ. ಜೊತೆಗೆ +0.528 ರನ್ ರೇಟ್ ಇದೆ. ಇನ್ನು ನಾಲ್ಕನೇ ಸ್ಥಾನದಲ್ಲಿರುವ ಎಸ್ಆರ್ಹೆಚ್ ಈಗಾಗಲೇ 7 ಪಂದ್ಯಗಳನ್ನು ಗೆದ್ದು 14 ಪಾಯಿಂಟ್ಸ್ ಪಡೆದುಕೊಂಡಿದೆ. ಎಸ್ಆರ್ಹೆಚ್ ಇಲ್ಲಿಯವರಗೆ 12 ಪಂದ್ಯಗಳನ್ನು ಆಡಿದ್ದು, ಇನ್ನೂ ಎರಡು ಪಂದ್ಯಗಳು ಬಾಕಿ ಇದೆ. ನೆಟ್ ರನ್ ರೇಟ್ +0.406 ಹೊಂದಿರುವ ಎಸ್ಆರ್ಹೆಚ್ ಪ್ಲೇ-ಆಫ್ ಪ್ರವೇಶ ಮಾಡೋದು ಬಹುತೇಕ ಪಕ್ಕಾ ಆಗಿದೆ. ಆದರೆ ನಾಲ್ಕನೇ ಸ್ಥಾನಕ್ಕಾಗಿ ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಜಿದ್ದಾಜಿದ್ದಿನ ಪೈಪೋಟಿ ಪಕ್ಕಾ ಆಗಲಿದೆ.
ಆರ್ಸಿಬಿಗೆ ಗೆಲುವಿನ ಮುಂದಿನ ಅಧ್ಯಾಯ ಏನು..?
ಮೇ 18 ರಂದು ನಡೆಯುವ ಪಂದ್ಯದಲ್ಲಿ ಆರ್ಸಿಬಿ, ಸಿಎಸ್ಕೆ ವಿರುದ್ಧ ಗೆಲ್ಲಬೇಕಿದೆ. ಗೆದ್ದರೆ ಆರ್ಸಿಬಿ ಪಾಯಿಂಟ್ಸ್ 14ಕ್ಕೆ ಏರಿಕೆ ಆಗಲಿದೆ. ಕೇವಲ ಗೆಲುವು ಮಾತ್ರವಲ್ಲ, ಸಿಎಸ್ಕೆ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಲೆಬೇಕು. ಕೆಲವು ವರದಿಗಳ ಪ್ರಕಾರ ಸಿಎಸ್ಕೆಯನ್ನು 18 ರನ್ಗಳ ಅಂತರದಿಂದ ಅಥವಾ 11 ಬಾಲ್ಗಳು ಬಾಕಿ ಇರುವಾಗ ಆರ್ಸಿಬಿ ಗೆಲುವು ಸಾಧಿಸಬೇಕು .ಅಷ್ಟೇ ಅಲ್ಲದೆ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸೋಲಬೇಕು.
ಪ್ಲೇ-ಆಫ್ ಓಟ ಹೇಗಿರಲಿದೆ..?
• ಎಸ್ಆರ್ಹೆಚ್ ತಂಡವು ಮುಂದೆ ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ ತಂಡದ ಜೊತೆ ಒಂದೊಂದು ಪಂದ್ಯ ಆಡಲಿದೆ.
• ಈ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಿದರೂ ಎಸ್ಆರ್ಹೆಚ್ ಸುಲಭವಾಗಿ ಪ್ಲೇ-ಆಫ್ಗೆ ಪ್ರವೇಶ ಮಾಡಲಿದೆ.
• ಯಾಕೆಂದರೆ ಎಸ್ಆರ್ಹೆಚ್ನ ನೆಟ್ ರನ್ ರೇಟ್ ಉತ್ತಮವಾಗಿದೆ.
• ಇದರ ಮಧ್ಯೆ ಲಕ್ನೋ ಸೂಪರ್ ಜೈಂಟ್ಸ್ ಕೂಡ ಪ್ಲೇ ಆಫ್ ಕನಸು ಕಾಣುತ್ತಿದೆ.
• ಆದರೆ ಎಲ್ಎಸ್ಜಿಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ.
• ಕಳಪೆ ನೆಟ್ ರನ್ ರೇಟ್ -0.769 ಹೊಂದಿರುವ ಎಲ್ಎಸ್ಜಿ ಮುಂದಿನ ಎರಡೂ ಪಂದ್ಯಗಳನ್ನೂ ಗೆದ್ದರೂ ಭಾರೀ ಅಂತರದಿಂದ ಗೆಲುವು ಸಾಧಿಸಬೇಕಿದೆ.
• ಇತ್ತ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿವೆ.
• ಹೀಗಾಗಿ CSK, RCB, LSG ಮತ್ತು SRH ನಡುವೆ ಪ್ಲೇ-ಆಫ್ಗೆ ಭಾರೀ ಪೈಪೋಟಿ ಶುರುವಾಗಿದೆ.