- ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಧ್ವಂಸಗೊಳಿಸಿದ ಖಲಿಸ್ತಾನಿ ಪರ ಕಾರ್ಯಕರ್ತರು
- ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹೆಸರು ಉಲ್ಲೇಖ
ಇಟಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲು ನಿರ್ಧರಿಸಿದ್ದ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಖಲಿಸ್ತಾನಿ ಪರ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಜಿ-5 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಇಟಲಿಗೆ ಭೇಟಿ ನೀಡಬೇಕಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಖಲಿಸ್ತಾನ್ ಪರ ಉಗ್ರರ ಅಟ್ಟಹಾಸ ಆತಂಕ ಸೃಷ್ಟಿಸಿದೆ.
ಇನ್ನು ಖಲಿಸ್ತಾನಿ ಭಯೋತ್ಪಾದಕರು ಪ್ರತಿಮೆಯ ತಳಭಾಗದಲ್ಲಿ ಗೀಚಿ ವಿರೂಪಗೊಳಿಸಿದ್ದಾರೆ. ಇದರಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ನ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಘಟನೆಯನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದ್ದು, ಇಟಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೊನಿ ಅವರಿಗೆ ತನ್ನ ಅಸಮಾಧಾನವನ್ನು ತಿಳಿಸಿದೆ. ಇದರಿಂದ ಎಚ್ಚೆತ್ತಿರುವ ಇಟಲಿ ಸರ್ಕಾರ, ಗಾಂಧೀಜಿ ಪ್ರತಿಮೆಯನ್ನು ಸರಿಪಡಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಈ ಬಗ್ಗೆ ಮಾತನಾಡಿ, “ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ದುರದೃಷ್ಟಕರ. ಈ ವಿಷಯದ ಬಗ್ಗೆ ನಾವು ಇಟಲಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆʼʼ ಎಂದು ತಿಳಿಸಿದ್ದಾರೆ.