ಜೈಪುರ : ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಹನುಮಾನ್ ಚಾಲೀಸಾ ಆಲಿಸುವುದು ಅಪರಾಧವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಒಬ್ಬರ ನಂಬಿಕೆಯನ್ನು ಪಾಲಿಸುವುದು ಕಷ್ಟ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ ಎಂದು ಪುನರುಚ್ಚರಿಸಿರುವ ಪ್ರಧಾನಿ ಮೋದಿ, ಈ ಹೇಳಿಕೆ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟವನ್ನು ಕೆರಳಿಸಿದೆ. ಎಲ್ಲಾ ಕಡೆ ಮೋದಿಯನ್ನು ನಿಂದಿಸಲು ಪ್ರಾರಂಭಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜಸ್ಥಾನದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸಂಪತ್ತನ್ನು ಕಿತ್ತುಕೊಂಡು ಆಯ್ದ ಜನರಿಗೆ ಹಂಚಲು ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ ಎಂದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಂಪತ್ತಿನ ಸಮೀಕ್ಷೆ ಮಾಡುತ್ತೇವೆ. ಸಂಪತ್ತಿನ ಎಕ್ಸ್ ರೇ ಮಾಡುವುದಾಗಿ ಅವರ ನಾಯಕರೊಬ್ಬರು ಭಾಷಣದಲ್ಲಿ ಹೇಳಿದ್ದರು. ಈ ರಹಸ್ಯವನ್ನು ಮೋದಿ ಬಯಲು ಮಾಡಿದಾಗ ಕಾಂಗ್ರೆಸ್ನ ಹಿಡೆನ್ ಅಜೆಂಡಾ ಹೊರಬಿತ್ತು. ಈಗ ಭಯ ಶುರುವಾಗಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.