ಜುಲೈ 5 ರಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಇಂಜಿನಿಯರ್ ರಶೀದ್ ಎಂದು ಕರೆಯಲ್ಪಡುವ ಕಾಶ್ಮೀರ ನಾಯಕ ಶೇಖ್ ಅಬ್ದುಲ್ ರಶೀದ್ ಅವರಿಗೆ ದೆಹಲಿ ನ್ಯಾಯಾಲಯ 2 ಗಂಟೆಗಳ ಕಸ್ಟಡಿ ಪೆರೋಲ್ ನೀಡಿದೆ.
2017ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಹಣ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ರಶೀದ್ ಜೈಲಿನಲ್ಲಿ ಇದ್ದಕೊಂಡೇ 2024 ರ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರೀ ಅಂತದಿಂದ ಗೆಲುವು ಸಾಧಿಸಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಲು ಮತ್ತು ಸಂಸತ್ತಿನ ಕಾರ್ಯಗಳನ್ನು ನಿರ್ವಹಿಸಲು ಕಸ್ಟಡಿ ಪೆರೋಲ್ ಕೋರಿ ಅರ್ಜಿ ಸಲ್ಲಿಸಿದ್ದರು. ಜೂನ್ 22 ರಂದು ವಿಶೇಷ ನ್ಯಾಯಾಲಯವು ಪ್ರಕರಣವನ್ನು ಮುಂದೂಡಿ ಪ್ರತಿಕ್ರಿಯೆ ನೀಡುವಂತೆ ಎನ್ಐಎಗೆ ಕೇಳಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ ಪೆರೋಲ್ ನೀಡಲು ತನ್ನ ಒಪ್ಪಿಗೆ ನೀಡಿದೆ. ಮಾಧ್ಯಮಗಳೊಂದಿಗೆ ಸಂವಹನ ನಡೆಸದಿರುವುದು ಸೇರಿದಂತೆ ಕೆಲವು ಷರತ್ತುಗಳೊಂದಿಗೆ ಕಸ್ಟಡಿ ಪೆರೋಲ್ ನೀಡಲಾಗಿದೆ ಎಂದು ಎನ್ಐಎ ವಕೀಲರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಶೀದ್ 4,72,481 ಮತಗಳ ಭರ್ಜರಿ ಅಂತರದಿಂದ ಜಯಗಳಿಸಿದ್ದಾರೆ.