- ಮತ್ತೊಂದು ಅಪಾಯಕಾರಿ ಕಾಯಿಲೆ ಜಪಾನ್ನಲ್ಲಿ ಪತ್ತೆ
- ಈ ಕಾಯಿಲೆಯನ್ನು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.
ಮಹಾಮಾರಿ ಕೋವಿಡ್ ನಿಂದ ಜಗತ್ತು ಈಗ ಚೇತರಿಸಿಕೊಳ್ಳುತ್ತಿದೆ , ಈ ಮಧ್ಯೆ ಮತ್ತೊಂದು ಅಪಾಯಕಾರಿ ಕಾಯಿಲೆ ಜಪಾನ್ನಲ್ಲಿ ಪತ್ತೆಯಾಗಿದ್ದು, ಸೋಂಕು ತಗುಲಿದ 48 ಗಂಟೆಯಲ್ಲೇ ಮಾನವನ ಸಾವಿಗೆ ಕಾರಣವಾಗುತ್ತದೆ.
ಯಾವ ಬ್ಯಾಕ್ಟೀರಿಯಾ?
ಈ ಸೋಂಕಿಗೆ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಕಾರಣವಾಗಿದ್ದು, ಜಪಾನ್ನಲ್ಲಿ ವ್ಯಾಪಕವಾಗಿ ಹರುಡುತ್ತಿದೆ , ಈ ಅಪರೂಪದ ಕಾಯಿಲೆಯನ್ನು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (Streptococcal Toxic Shock Syndrome-STSS) ಎಂದು ಕರೆಯಲಾಗುತ್ತದೆ.
ಜಪಾನ್ನಲ್ಲಿ ಈಗಾಗಲೇ ಈ ಮಾಂಸ ಭಕ್ಷಕ ಬ್ಯಾಕ್ಟೀರಿಯಾದಿಂದ ಕಾಣಿಸಿಕೊಳ್ಳುವ ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಪ್ರಕರಣ 977ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಒಟ್ಟು 941 ಪ್ರಕರಣಗಳು ವರದಿಯಾಗಿದ್ದವು ಆದರೆ ಈಗ ಭಾರಿ ಸಂಖ್ಯೆಯಲ್ಲಿ ಪ್ರಕರಣ ಏರಿಕೆ ಆಗಿದ್ದು ಆತಂಕ ಸೃಷ್ಟಿಸಿದೆ .
“ಹೆಚ್ಚಿನ ಸಾವು ಸೋಂಕು ತಗುಲಿದ 48 ಗಂಟೆಗಳ ಒಳಗೆ ಸಂಭವಿಸುತ್ತವೆ. ಸೋಂಕು ಬಾಧಿತರ ಪಾದ ಬೆಳಿಗ್ಗೆ ಊದಿಕೊಂಡರೆ ಮಧ್ಯಾಹ್ನದ ವೇಳೆಗೆ ಊತ ಮೊಣಕಾಲಿನವರೆಗೆ ಹರಡುತ್ತದೆ ಮತ್ತು ಅವರು 48 ಗಂಟೆಗಳಲ್ಲಿ ಸಾಯುವ ಸಾಧ್ಯತೆ ಇದೆ” ಎಂದು ಟೋಕಿಯೊ ಮಹಿಳಾ ವೈದ್ಯಕೀಯ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಾಪಕ ಕೆನ್ ಕಿಕುಚಿ ಆಘಾತಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ನ ಲಕ್ಷಣ
ದೇಹದ ಭಾಗಗಳಲ್ಲಿ ನೋವು ಉಂಟಾಗುವುದು , ಊತ, ಜ್ವರ ಹಾಗೂ ಕಡಿಮೆ ರಕ್ತದೊತ್ತಡ ಮುಂತಾದವು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ನ ಲಕ್ಷಣಗಳು. ಇದು ಜೀವಕೋಶಗಳ ಸಾವು, ತೀವ್ರ ಜ್ವರ, ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ ಹಾಗೂ ಸಾವಿಗೆ ಕೂಡ ಕಾರಣವಾಗಬಹುದು. ವಯಸ್ಕರು, ಪ್ರಮುಖವಾಗಿ 50 ವರ್ಷ ದಾಟಿದವರಿಗೆ ಈ ಕಾಯಿಲೆ ಹೆಚ್ಚು ಅಪಾಯಕಾರಿ. ಇದರ ತಡೆಗೆ ಕೈಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಜತೆಗೆ ಯಾವುದೇ ತೆರೆದ ಗಾಯಗಳನ್ನು ನಿರ್ಲಕ್ಷಿಸಬಾರದು. ಇನ್ನು ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಜಪಾನ್ ಜತೆಗೆ ಯುರೋಪ್ನ ಐದು ದೇಶಗಳು ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಪ್ರಕರಣಗಳ ಹೆಚ್ಚು ವರದಿಯಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ (WHO) ವರದಿ ಮಾಡಿದೆ.