ಬೆಂಗಳೂರಿನ ಪ್ರಖ್ಯಾತ ಹೃದ್ರೋಗ ಆಸ್ಪತ್ರೆ ಜಯದೇವದಲ್ಲಿ ವಾರ್ಡ್ ಬಾಯ್ ಒಬ್ಬ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮೆರಾ ಆನ್ ಮಾಡಿ ಮೊಬೈಲ್ ಫೋನ್ ಇಟ್ಟು ವಿಡಿಯೋ ಮಾಡಿರುವ ಘಟನೆ ನಡೆದಿದೆ. ಅಕ್ಟೋಬರ್ 31 ರಂದು ಆಸ್ಪತ್ರೆ ನೌಕರ ಮಹಿಳೆಯೊಬ್ಬರು ವಾಷ್ ರೂಂಗೆ ಹೋಗಿದ್ದಾಗ ಗೋಡೆಯ ಮೇಲೆ ಮೊಬೈಲ್ ನೋಡಿ ಗಾಬರಿಯಾಗಿದ್ದಾರೆ. ಗೋಡೆ ಮೇಲಿದ್ದ ಮೊಬೈಲ್ ಪರಿಶೀಲಿಸಿದಾಗ ತನ್ನದೇ ವಿಡಿಯೋ ರೆಕಾರ್ಡ್ ಆಗಿರೋದನ್ನ ನೋಡಿ ಆ ಮಹಿಳೆ ಬೆಚ್ಚಿ ಬಿದ್ದಿದ್ದಾರೆ.
ಮೊಬೈಲ್ ಜೊತೆ ಶೌಚಾಲಯದಿಂದ ಆಚೆ ಬರುವಾಗ ಅದೇ ಆಸ್ಪತ್ರೆ ವಾರ್ಡ್ ಬಾಯ್ ಯಲ್ಲಾಲಿಂಗ ಅಡ್ಡಗಟ್ಟಿದ್ದಾನೆ, ಈ ವೇಳೆ ಮಹಿಳೆ ಕಿರುಚಿಕೊಂಡಾಗ ಕಾಮಿ ವಾರ್ಡ್ಬಾಯ್ ಸಿಕ್ಕಿಬಿದ್ದಿದ್ದಾನೆ. ಈ ಬಗ್ಗೆ ಮಾತನಾಡಿರೋ ಆಸ್ಪತ್ರೆ ನಿರ್ದೇಶಕ ಡಾ.ರವೀಂದ್ರ ಅವರು ಆಸ್ಪತ್ರೆಯಲ್ಲಿ ಕಮಿಟಿ ಇದೆ, ವಿಚಾರಣೆ ಆಗ್ತಿದೆ, ಇದು ನಮ್ಮ ಆಸ್ಪತ್ರೆ ಘನತೆಗೆ ಮಸಿ ಬಳಿಯುವ ಕೆಲಸ, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಘಟನೆ ಸಂಬಂಧ ಮಹಿಳೆಯಿಂದ ತಿಲಕ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.