ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಬಾಂಬೆ ಹೈಕೋರ್ಟ್ ಮೆಡಿಕಲ್ ಬೇಲ್ ನೀಡಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ನರೇಶ್ ಗೋಯಲ್ ಅವರಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗುವಂತೆ ಮೇ ತಿಂಗಳಲ್ಲಿ ನ್ಯಾಯಪೀಠವು ಮಧ್ಯಂತರ ವೈದ್ಯಕೀಯ ಜಾಮೀನು ನೀಡಿತ್ತು. ಇದೀಗ ಈ ಮಧ್ಯಂತರ ಜಾಮೀನು ಆದೇಶವನ್ನು ಪರ್ಮನೆಂಟ್ ಆರ್ಡರ್ ಆಗಿ ಅಪ್ಡೇಟ್ ಮಾಡಲಾಗಿದೆ.
ಮನಿ ಲಾಂಡರಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ನರೇಶ್ ಗೋಯಲ್ ಅವರ ಖಾಯಂ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು. ಅವರು ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ. ಆದರೆ, ಕಸ್ಟಡಿಯಲ್ಲಿಯೇ ಇರಬೇಕು ಎಂದು ವಾದಿಸಿತ್ತು. ಆದರೆ, ಹೈಕೋರ್ಟ್ ನ್ಯಾಯಪೀಠವು ಗೋಯಲ್ ಅವರಿಗೆ ಜಾಮೀನು ಒದಗಿಸುವ ತೀರ್ಮಾನಕ್ಕೆ ಬಂದಿತು.
ಮೇ ತಿಂಗಳಲ್ಲಿ ನ್ಯಾಯಪೀಠವು ಎರಡು ತಿಂಗಳ ಅವಧಿಗೆ ಮಧ್ಯಂತರ ಜಾಮೀನು ದಯಪಾಲಿಸಿತ್ತು. ಅದು ನಾಲ್ಕು ವಾರಗಳಷ್ಟು ಕಾಲ ವಿಸ್ತರಣೆ ಆಯಿತು. ಅದಾದ ಬಳಿಕ ಮತ್ತೂ ಎರಡು ತಿಂಗಳು ಅವಧಿ ವಿಸ್ತರಣೆ ಆಯಿತು.
ಜೆಟ್ ಏರ್ವೇಸ್ ಸಂಸ್ಥೆಗೆ ಕೆನರಾ ಬ್ಯಾಂಕ್ನಿಂದ ನೀಡಲಾಗಿದ್ದ ಸಾಲದಲ್ಲಿ 538.63 ಕೋಟಿ ರೂ ಮೊತ್ತದ ಹಣವನ್ನು ಅಕ್ರಮವಾಗಿ ಬೇರೆಡೆ ವರ್ಗಾವಣೆ ಮಾಡಲಾಗಿದೆ ಎಂಬುದು ನರೇಶ್ ಗೋಯಲ್ ಹಾಗೂ ಇತರರ ಮೇಲೆ ಇಡಿ ಮಾಡುತ್ತಿರುವ ಆರೋಪ. ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ 2023ರ ಸೆಪ್ಟಂಬರ್ನಲ್ಲಿ ಬಂಧಿಸಿತು. 2023ರ ನವೆಂಬರ್ನಲ್ಲಿ ಅವರ ಪತ್ನಿ ಅನಿತಾ ಗೋಯಲ್ ಅವರನ್ನೂ ಬಂಧಿಸಲಾಯಿತು.
ಅನಿತಾ ಗೋಯಲ್ ದೀರ್ಘಕಾಲದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರ ರೋಗದ ಮಟ್ಟ ಕೊನೆಯ ಹಂತ ತಲುಪಿತ್ತು. ಇದೇ ಕಾರಣಕ್ಕೆ ಅವರಿಗೆ ಬಂಧನದ ದಿನವೇ ಜಾಮೀನು ಸಿಕ್ಕಿತು. ಇದೇ ಮೇ 16ರಂದು ಅವರು ಅಸು ನೀಗಿದರು. ನರೇಶ್ ಗೋಯಲ್ ಕೂಡ ಕ್ಯಾನ್ಸರ್ ಕಾಯಿಲೆಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಪ್ರಲ್ಹಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು!