ಜಾರ್ಖಂಡ್ನ 13ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೈಲಿನಿಂದ ಹೊರಬಂದ ನಾಲ್ಕೇ ದಿನದಲ್ಲಿ ಮತ್ತೆ ಅಧಿಕಾರ ಗಿಟ್ಟಿಸಿದ ಸೊರೇನ್ ಅವರಿಗೆ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಪ್ರಮಾಣ ವಚನ ಬೋಧಿಸಿದರು.
ನಿನ್ನೆಯಷ್ಟೇ ಚಂಪೈ ಸೊರೆನ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಮತ್ತು ಆರ್ಜೆಡಿ ಮುಖಂಡ ಸತ್ಯಾನಂದ್ ಭೋಕ್ತಾ ಅವರೊಂದಿಗೆ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದ್ದರು.
ಭೂಹಗರಣ, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನಿನಲ್ಲಿ ಜೈಲಿನಿಂದ ಹೊರಗೆ ಬಂದಿರುವ ಹೇಮಂತ್ ಸೊರೇನ್ ಮತ್ತೆ ಅಧಿಕಾರಕ್ಕೇರಲು ತನ್ನ ಪರವಾಗಿದ್ದ ಚಂಪೈ ಸೊರೇನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು.
ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದ ಸೊರೇನ್ ಅವರಿಗೆ ಜೂನ್ 28 ರಂದು ಹೈಕೋರ್ಟ್ ಜಾಮೀನು ನೀಡಿ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಜನವರಿ 31 ರಂದು ಇಡಿ ಅಧಿಕಾರಿಗಳು ಬಂಧಿಸಿದ್ದರು. ಬಂಧನಕ್ಕೂ ಮುನ್ನ ಸೊರೇನ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೊರೇನ್ ಜೈಲಿನಿಂದ ಹೊರಬಂದ ಕೂಡಲೇ ಜುಲೈ 2ರಂದು ಸಭೆ ಸೇರಿದ್ದ ಶಾಸಕರು ಸೊರೇನ್ ಅವರನ್ನೇ ತಮ್ಮ ಶಾಸಕಾಂಗ ನಾಯಕನಾಗಿ ಆಯ್ಕೆ ಮಾಡಿದ್ದರು.
ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಇಡಿ ಅಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದರೆ ಮತ್ತೆ ಜೈಲು ಸೇರುವ ಸಾಧ್ಯತೆಯಿದೆ.