ಇಸ್ರೇಲ್ – ಪ್ಯಾಲಸ್ತೀನ್ ಯುದ್ಧದ ಬಿಸಿ ಹಲವು ದೇಶಗಳಿಗೆ ತಟ್ಟಿದೆ. ಇತ್ತೀಚೆಗಷ್ಟೇ ಅಮೆರಿಕ ರಾಜಧಾನಿಯಲ್ಲಿ ಅಮೆರಿಕ ಧ್ವಜಕ್ಕೆ ಪ್ಯಾಲಸ್ತೀನ್ ಪರ ಹೋರಾಟಗಾರರು ಬೆಂಕಿ ಹಚ್ಚಿದ್ದರು. ಇದೀಗ ಫ್ರಾನ್ಸ್ ಸರದಿ! ಒಲಿಂಪಿಕ್ಸ್ ಉದ್ಘಾಟನೆಗೆ ಕೆಲವೇ ಗಂಟೆಗಳ ಮುನ್ನ ಫ್ರಾನ್ಸ್ನಲ್ಲಿ ರೈಲ್ವೆ ಸಂಪರ್ಕ ವ್ಯವಸ್ಥೆಯ ಆಯಕಟ್ಟಿನ ಸ್ಥಳಗಳಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, 8 ಲಕ್ಷ ಪ್ರಯಾಣಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ, ಒಲಿಂಪಿಕ್ಸ್ ನಡೆಯುತ್ತಿರುವ ಸ್ಥಳದಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ.
ಅಂತಾರಾಷ್ಟ್ರೀಯ ಕ್ರೀಡಾ ಕೂಟ ಒಲಿಂಪಿಕ್ಸ್ ಆರಂಭಕ್ಕೆ ಕೆಲವೇ ಗಂಟೆ ಮುನ್ನ ಫ್ರಾನ್ಸ್ ದೇಶದಾದ್ಯಂತ ರೈಲ್ವೆ ವ್ಯವಸ್ಥೆ ಮೇಲೆ ಸಂಘಟಿತ ದಾಳಿ ನಡೆದಿದೆ. ರೈಲ್ವೆ ಇಲಾಖೆಗೆ ಸೇರಿದ ಸ್ವತ್ತುಗಳ ಮೇಲೆ ಆಯಕಟ್ಟಿನ ಸ್ಥಳಗಳಲ್ಲಿ ಬೆಂಕಿ ಇಡಲಾಗಿದೆ! ಹೀಗಾಗಿ, ಫ್ರಾನ್ಸ್ ದೇಶದ ಹೈಸ್ಪೀಡ್ ರೈಲು ಸೇವೆ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು, ಸುಮಾರು 8 ಲಕ್ಷ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಫ್ರಾನ್ಸ್ ದೇಶದಾದ್ಯಂತ ರೈಲು ಸಂಪರ್ಕ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ರೈಲು ಪ್ರಯಾಣಕ್ಕೆ ಮುಂದಾಗಿದ್ದ ಪ್ರಯಾಣಿಕರಿಗೆ ತಮ್ಮ ಪ್ರಯಾಣ ಮುಂದೂಡುವಂತೆ ಸರ್ಕಾರ ಆದೇಶ ನೀಡಿದೆ. ಇದು ದುರುದ್ದೇಶ ಪೂರಿತ, ಪೂರ್ವ ನಿಯೋಜಿತ ಹಾಗೂ ಸಂಘಟಿತ ವಿಧ್ವಂಸಕ ಕೃತ್ಯ ಎಂದು ಫ್ರಾನ್ಸ್ ಗೃಹ ಇಲಾಖೆಯ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ.