ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಲೋಕ ಅದಾಲತ್ ಒಗ್ಗೂಡಿಸಿರುವಂತಹ ಅಪರೂಪದ ಘಟನೆಗೆ ಕೋಲಾರದ ಶ್ರೀನಿವಾಸಪುರ ನ್ಯಾಯಾಲಯ ಸಾಕ್ಷಿಯಾಗಿದೆ. ಜೀವನಾಂಶ ಕೋರಿ ಪತ್ನಿ ಜಯಲಕ್ಷ್ಮೀ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಬ್ಬರನ್ನು ಮನವೊಲಿಸಿದ ನ್ಯಾಯಾಧೀಶ ಹೆಚ್.ಆರ್.ಸಚಿನ್ ಗಂಡ-ಹೆಂಡತಿಯನ್ನು ಒಗ್ಗೂಡಿಸಿದ್ದಾರೆ. ಕೋರ್ಟ್ ಹಾಲ್ನಲ್ಲೇ ಪರಸ್ಪರ ಹೂವಿನ ಹಾರವನ್ನು ದಂಪತಿ ಬದಲಿಸಿಕೊಂಡಿದ್ದಾರೆ.
ಲಕ್ಷ್ಮೀಪುರ ಗ್ರಾಮದ ದಂಪತಿ ಜಯಲಕ್ಷ್ಮೀ ಹಾಗೂ ಸುಬ್ರಮಣಿ. ಕಳೆದ 5 ವರ್ಷಗಳಿಂದ ಇಬ್ಬರ ಸಂಸಾರದಲ್ಲಿ ಬಿರುಕು ಬಿಟ್ಟಿತ್ತು. ಇಬ್ಬರ ಮಧ್ಯೆ ಒಮ್ಮತ ಮೂಡದ ಕಾರಣ ಪತಿಯಿಂದ ದೂರವಾಗಿ ಜೀವನಾಂಶಕ್ಕಾಗಿ ಪತ್ನಿ ಜಯಲಕ್ಷ್ಮೀ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಧೀಶರು ಕುಟುಂಬ ಅಂದ ಮೇಲೆ ಮನಸ್ತಾಪಗಳು ಸಹಜ. ಗಂಡ ಹೆಂಡತಿಯರ ಮಧ್ಯೆ ಸಣ್ಣಪುಟ್ಟ ಜಗಳ ಆಗುತ್ತವೆ. ಅದೇ ಜಗಳ ವಿಕೋಪಕ್ಕೆ ಹೋಗಿ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರುತ್ತಾರೆ ಎಂದು ಗಂಡ-ಹೆಂಡತಿ ಮನವಲಿಸಿದ್ದಾರೆ. ಹೀಗೆ ಕೋರ್ಟ್ ಮೆಟ್ಟಿಲೇರಿದ ಕೋಲಾರ ಜಿಲ್ಲೆಯ ದಂಪತಿಯನ್ನು ಲೋಕ ಅದಾಲತ್ನಲ್ಲಿ ಒಂದುಗೂಡಿಸಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ನ್ಯಾಯಾಲಯದಲ್ಲಿ ನಡೆದಿದೆ.