ಯಾವುದೇ ಕೆಲಸವಾದರೂ ಶ್ರೇಷ್ಠತೆಯೇ ನಮ್ಮ ಮೂಲ ಮಂತ್ರವಾಗಬೇಕು. ವ್ಯಕ್ತಿಗಳು ಮುಖ್ಯವಲ್ಲ. ವ್ಯಕ್ತಿತ್ವದ ಮೂಲಕ ಶ್ರೇಷ್ಠತೆಯನ್ನು ಮನಗಾಣಬೇಕು ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ನಗರದ ಕಾವೇರಿ ಭವನದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನೌಕರರ ಸಂಘದಿಂದ ಆಯೋಜಿಸಿದ್ದ 537 ನೇ ಕನಕದಾಸ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಕನಕದಾಸರು ಶ್ರದ್ಧೆ ಮತ್ತು ಭಕ್ತಿಯ ಮೂಲಕ ಶ್ರೇಷ್ಠರಾಗಿದ್ದಾರೆ. ಅವರ ಪರಂಪರೆಯನ್ನು ನಾವು ಮುಂದುವರೆಸಬೇಕು. ಸಾಮಾಜಿಕ ನ್ಯಾಯಕ್ಕಾಗಿ ಕನಕದಾಸರು ಹೋರಾಟ ಮಾಡಿದರು. ಕನಕನ ಭಕ್ತಿಗೆ ಕನಕನ ಕಿಂಡಿಯೇ ಸ್ಫೂರ್ತಿ. ಪ್ರೀತಿ, ವಿಶ್ವಾಸದಿಂದ ಇದ್ದರೆ ದೇವರೇ ನಮ್ಮ ಬಳಿಗೆ ಬರುತ್ತಾನೆ ಎಂಬುದಕ್ಕೆ ಕನಕನೇ ನಮಗೆ ಆದರ್ಶ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯಕ್ಕೆ ಮತ್ತೊಂದು ಹೆಸರಾಗಿದ್ದಾರೆ. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಿಗೆ ನಾಯಕರಾಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಬಡವರ ಕೆಲಸಕ್ಕೆ ಆದ್ಯತೆ ನೀಡಿದ್ದಾರೆ. ನಮ್ಮ ಕೆಲಸ ಕಾರ್ಯಗಳಲ್ಲಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ ಎಂದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌದರಿ ಮಾತನಾಡಿ, ನಾನು ಎಂಬ ಅಹಂ ನಿವಾರಣೆಯಾದರೆ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಇತ್ತೀಚಿನ ಅಧ್ಯಯನದ ಪ್ರಕಾರ ಮನೆಯಲ್ಲಿ ಪ್ರತಿದಿನ ಶೇ 32 ರಷ್ಟು ಪುರುಷರು ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾರೆ. ಶೇ 72 ರಷ್ಟು ಪುರುಷರ ಪ್ರಕಾರ ಹೆಣ್ಣು ಮಕ್ಕಳನ್ನು ಸರಿಯಾಗಿ ಇಟ್ಟುಕೊಂಡರೆ ಮಾತ್ರ ಸಂಸಾರ ನಡೆಯುತ್ತದೆಯಂತೆ. ಇಂತಹ ಮನಸ್ಥಿತಿ ನಿವಾರಣೆಯಾಗಬೇಕು ಎಂದು ಹೇಳಿದರು.
ರಾಮೋಹಳ್ಳಿ ರಾಮಕೃಷ್ಣ ಯೋಗಾಶ್ರಮದ ಅಧ್ಯಕ್ಷರಾದ ಸ್ವಾಮಿ ಯೋಗೇಶ್ವರಾನಂದ ಸ್ವಾಮೀಜಿ, ಜಲಮಂಡಳಿ ಮುಖ್ಯ ಆಡಳಿತಾಧಿಕಾರಿ ಸಿ. ಮದನ್ ಮೋಹನ್, ಆರ್ಥಿಕ ಸಲಹೆಗಾರ ಜಿ.ಎಸ್. ಸುಬ್ಬರಾಮಯ್ಯ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.